ADVERTISEMENT

ವಿದ್ಯುತ್ ಕೊರತೆ ನೀಗಿಸಲು ಸರ್ಕಾರ ಸಿದ್ಧ: ಸಿಎಂ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 8:40 IST
Last Updated 14 ಮಾರ್ಚ್ 2011, 8:40 IST

ಚಿತ್ರದುರ್ಗ: ಬೇಸಿಗೆಯ ದಿನಗಳಲ್ಲಿ ಸಹಜವಾಗಿ ಉಂಟಾಗುವ ವಿದ್ಯುತ್ ಕೊರತೆ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರಕ್ಕೆ ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುವುದರಿಂದ ಅಗತ್ಯ ವಿದ್ಯುತ್ ಖರೀದಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಹೊರರಾಜ್ಯಗಳಿಂದ ವಿದ್ಯುತ್ ಖರೀದಿಸಲು ಸೂಚಿಸಲಾಗಿದ್ದು, ಯಾವುದೇ ತೊಂದರೆಯಾಗದಂತೆ ವಿದ್ಯುತ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮೂರು ವಿಧಾನಸಭಾ ಕ್ಷೇತ್ರ ನಡೆಯಲಿರುವ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಆತ್ಮವಿಶ್ವಾಸದಿಂದ ಹೇಳಿದ ಮುಖ್ಯಮಂತ್ರಿ, ರಾಜ್ಯದ ಜನತೆ ನಮ್ಮ ಪರವಾಗಿರುವಾಗ ನಮಗೆ ಸೋಲು ಇಲ್ಲ ಎಂದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿದೆ. 30 ವರ್ಷಗಳ ನಂತರ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನ ಇತಿಹಾಸದಲ್ಲಿಯೇ ನಡೆಯದಂತಹ ಅಭೂತಪೂರ್ವ ಕಾರ್ಯಕ್ರಮವಾಗಿದೆ. ಮೂರು ದಿನಗಳಿಂದ ಬೆಳಗಾವಿಯಲ್ಲಿಯೇ ವಾಸ್ತವ್ಯ ಹೂಡಿ ಸಮ್ಮೇಳನದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.