ADVERTISEMENT

ವೀರಶೈವ ಧರ್ಮ ಸ್ವತಂತ್ರ ಧರ್ಮ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 7:01 IST
Last Updated 24 ಜೂನ್ 2013, 7:01 IST

ಹಿರಿಯೂರು: ಕೆಲವು ಪಟ್ಟಭದ್ರ ರಾಜಕಾರಣಿಗಳು ವೀರಶೈವರನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. 37 ಒಳಪಂಗಡ ಹೊಂದಿರುವ ಈ ಧರ್ಮ ಹಿಂದೂ ಧರ್ಮವಲ್ಲ. ಇದೊಂದು ಸ್ವತಂತ್ರ ಧರ್ಮ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಸಿದ್ದಲಿಂಗೇಶ್ವರ ಸ್ವಾಮೀಜಿ ಹೇಳಿದರು.

ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಸಮಾವೇಶ ಮತ್ತು ಸ್ವಾಭಿಮಾನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಂಚಮಸಾಲಿ ಜನಾಂಗ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಪ್ರಮಾಣಪತ್ರ ನೀಡುತ್ತಿಲ್ಲ. ಸರ್ಕಾರಕ್ಕೆ ನಮ್ಮ ಇರುವಿಕೆ ಗೊತ್ತಿಲ್ಲ. ಬೇರೆ ಪಂಗಡದವರು ತಮ್ಮ ಜತೆ ಹಿಂದೂ ಪದ ಸೇರಿಸಿಕೊಂಡು ಸರ್ಕಾರದ ಲಾಭ ಪಡೆದರು. ಎಸ್.ನಿಜಲಿಂಗಪ್ಪ ಅವರ ಆದರ್ಶವನ್ನು ನಮ್ಮ ಮಕ್ಕಳು ರೂಢಿಸಿಕೊಳ್ಳಬೇಕು. ಒಳ್ಳೆಯ ಅಂಕ ಗಳಿಸುವ ಮೂಲಕ ಪ್ರತಿಭಾನ್ವಿತ ಮಕ್ಕಳಾಗಬೇಕು ಎಂದು ಸ್ವಾಮೀಜಿ ಸಲಹೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ್ ದಿಂಡೂರ್, ಪಂಚಮಸಾಲಿ ಸಮಾಜವನ್ನು  2 ಎಗೆ ಸೇರಿಸಬೇಕು. ಎಂದು ಆಗ್ರಹಿಸಿದರು.

ಬಿ.ಎಸ್.ಮಂಜುನಾಥ ಸ್ವಾಮಿ, ಜಿತೇಂದ್ರ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಎಂ.ತಿಪ್ಪೇಸ್ವಾಮಿ ಸ್ವಾಗತಿಸಿದರು. ಎಚ್.ನಾಗರಾಜ್, ಬಾವಿ ಬೆಟ್ಟಪ್ಪ, ಎಂ.ಸೋಮನಗೌಡ ಪಾಟೀಲ್, ಚಂದ್ರಶೇಖರ್ ಮಹಡಿ, ಆಶಾ ಕಲ್ಲಪ್ಪ,  ಎಚ್.ಎನ್. ತಿಪ್ಪೇಸ್ವಾಮಿ, ಗಂಗಾಧರಪ್ಪ, ರುದ್ರಾಣಿ ಗಂಗಾಧರ್, ಬಿ.ಎಚ್.ವಿಶ್ವನಾಥ್, ಪರಮೇಶ್, ಸುರೇಶ್, ಪೂರ್ಣಿಮಾ, ನಿರ್ಮಲಾ, ವೀರೇಶ್, ವನಜಾಕ್ಷಮ್ಮ, ಶೈಲಜಾ ಉಪಸ್ಥಿತರಿದ್ದರು. ಜನಪದ ಸಾಹಿತಿ ಹರ್ತಿಕೋಟೆ ವೀರಭದ್ರಯ್ಯ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.