ಚಿತ್ರದುರ್ಗ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದು ಅಗತ್ಯವಿದೆ ಎಂದು ಸಂಸತ್ ಸದಸ್ಯ ಜನಾರ್ದನಸ್ವಾಮಿ ಪ್ರತಿಪಾದಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಸಿಸ್ಕೋ ಕಂಪೆನಿ ಸಹಯೋಗದಲ್ಲಿ ಆರಂಭಿಸಿರುವ `ಟೆಲಿ ಮೆಡಿಸಿನ್ ವಿಭಾಗ~ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಕಾಲೇಜಿನಿಂದ ಜಿಲ್ಲೆಯ ಜನತೆಗೂ ಮತ್ತು ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಅನುಕೂಲ ಆಗಲಿದೆ. ಆದರೆ, ಈಗಿರುವ ಆಸ್ಪತ್ರೆ ಜಾಗ ಸಾಕಾಗದಿರಬಹುದು. ಅನಿವಾರ್ಯವಾದರೆ ಸ್ಥಳಾಂತರ ಮಾಡಬೇಕಾಗುತ್ತದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಕುದಾಪರದಲ್ಲಿ ಡಿಆರ್‌ಡಿಒದಂತಹ ಪ್ರತಿಷ್ಠಿತ ಸಂಸ್ಥೆಗಳು ಸ್ಥಾಪನೆ ಆಗುತ್ತಿರುವುದರಿಂದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ವೈದ್ಯಕೀಯ ಕಾಲೇಜು ಸ್ಥಾಪಿಸುವುದು ತುರ್ತು ಅಗತ್ಯ. ಈ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು ಎಂದು ಅವರು ತಿಳಿಸಿದರು.
ಟೆಲಿಮೆಡಿಸಿನ್ ಮೂಲಕ ಗ್ರಾಮೀಣರಿಗೆ ತುರ್ತು ಸಂದರ್ಭದಲ್ಲಿ ತಜ್ಞ ವೈದ್ಯರ ಸೇವೆ ದೊರೆಯಲಿದೆ. ವೈದ್ಯರ ಕೊರತೆಯನ್ನು ಸಹ ಈ ತಂತ್ರಜ್ಞಾನ ನೀಗಿಸಲಿದೆ. ಜನಸಂಖ್ಯೆ ಹೆಚ್ಚಿದ್ದರೂ ಅದಕ್ಕೆ ತಕ್ಕ ವೈದ್ಯರ ಸಂಖ್ಯೆ ಹೆಚ್ಚಾಗಿಲ್ಲ. ಆದ್ದರಿಂದ ಮಾಹಿತಿ ತಂತ್ರಜ್ಞಾನದಿಂದ ತುರ್ತು ಸಂದರ್ಭದಲ್ಲಿ ತಜ್ಞ ವೈದ್ಯರ ಸೇವೆಯನ್ನು ಗ್ರಾಮೀಣರಿಗೆ ದೊರಕಿಸಿಕೊಡಬಹುದು ಎಂದು ನುಡಿದರು.
ತಜ್ಞ ವೈದ್ಯರ ಸೇವೆಯಿಂದ ಗ್ರಾಮೀಣ ಜನರು ವಂಚಿತರಾಗುತ್ತಿದ್ದು, ಟೆಲಿ ಮೆಡಿಸಿನ್ ಮೂಲಕ ಸೇವೆಯನ್ನು ಸಕಾಲದಲ್ಲಿ ಪಡೆಯಬಹುದಾಗಿದೆ. ಜಿಲ್ಲಾ ಆಸ್ಪತ್ರೆಯಿಂದ ಗ್ರಾಮಾಂತರ ಪ್ರದೇಶದ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ರೋಗಿಗಳಿಗೆ ತಜ್ಞ ವೈದ್ಯರಿಂದ ನೇರವಾಗಿ ಟೆಲಿಮೆಡಿಸಿನ್ ಮೂಲಕ ರೋಗಕ್ಕೆ ತಕ್ಕ ಚಿಕಿತ್ಸೆ ನೀಡಬಹುದು. ಇದರಿಂದ ಗ್ರಾಮಾಂತರ ಪ್ರದೇಶದಿಂದ ನಗರ, ಪಟ್ಟಣ ಪ್ರದೇಶಗಳಿಗೆ ಆಗಮಿಸುವ ಸಮಯ ಉಳಿಯುತ್ತದೆ ಮತ್ತು ತುರ್ತು ಚಿಕಿತ್ಸೆ ಸ್ಥಳದಲ್ಲಿಯೇ ಲಭ್ಯವಾಗಿ ಅನೇಕ ಜೀವಗಳನ್ನು ಕಾಪಾಡಲು ಸಹಕಾರಿಯಾಗುತ್ತದೆ ಎಂದರು.
ವೈದ್ಯರಿಗೆ ತಕ್ಕ ವೇತನ, ಸೌಲಭ್ಯಗಳು ದೊರೆಯದ ಕಾರಣ ತಜ್ಞ ವೈದ್ಯರು ವಿದೇಶಗಳಿಗೆ ತೆರಳುತ್ತಾರೆ. ಅಂತಹ ತಜ್ಞರ ಸೇವೆಯು ದೇಶದ ಜನತೆಗೆ ಸಿಗಬೇಕಾಗಿದೆ. ವೈದ್ಯರ ಕೊರತೆ ರಾಷ್ಟ್ರಮಟ್ಟದ ಸಮಸ್ಯೆಯಾಗಿದೆ. ಆದ್ದರಿಂದ ವೈದ್ಯರಿಗೆ ಉತ್ತಮ ವೇತನ ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಗತ್ಯವಿದೆ ಎಂದರು.
ಸಿಸ್ಕೋ ಕಂಪನಿಯ ಅಧ್ಯಕ್ಷ ಅರವಿಂದ್ ಸೀತಾರಾಮನ್ ಮಾತನಾಡಿ ಟೆಲಿ ಮೆಡಿಸಿನ್ ಸೇವೆ ಪಡೆಯಲು ಮಾಹಿತಿ ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಸಂಸ್ಥೆಯ ಒಡಂಬಡಿಕೆಯೊಂದಿಗೆ ಈಗಾಗಲೇ ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಸುಮಾರು 1,700 ಮಂದಿ ಇದರ ಸೌಲಭ್ಯ ಪಡೆದಿದ್ದಾರೆ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್. ವೆಂಕಟಶಿವಾರೆಡ್ಡಿ, ಜಿಲ್ಲಾ ಸರ್ಜನ್ ಡಾ.ವಿಶ್ವನಾಥ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಏನಿದು ಸೇವೆ?
ಪ್ರಾಥಮಿಕವಾಗಿ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮತ್ತೋಡು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆಗೆ ಸಂಪರ್ಕ ಕಲ್ಪಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಟೆಲಿ ಮೆಡಿಸಿನ್ ಮೂಲಕ ತಜ್ಞ ವೈದ್ಯರ ಸೇವೆಯನ್ನು ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.