ADVERTISEMENT

ವೈದ್ಯರ ಬೇಡಿಕೆ ಈಡೇರಿಸಲು ಬದ್ಧ: ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 5:25 IST
Last Updated 7 ಆಗಸ್ಟ್ 2012, 5:25 IST

ಹೊಳಲ್ಕೆರೆ: ವೈದ್ಯರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದರು.ಪಟ್ಟಣದಲ್ಲಿ ಸೋಮವಾರ ರೂ 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ಅನೇಕ ಬೇಡಿಕೆ ಮುಂದಿಟ್ಟುಕೊಂಡು ರಾಜೀನಾಮೆ ನೀಡಿದ್ದಾರೆ. ಆದರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಈ ಬಗ್ಗೆ ಆ. 9ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸರ್ಕಾರ ವೈದ್ಯರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಿದರು.

ಇದಕ್ಕೆ ಒಂದಿಷ್ಟು ಕಾಲಾವಕಾಶ ಬೇಕಾಗುತ್ತದೆ. ರಾಜ್ಯದಲ್ಲಿ 891 ತಜ್ಞವೈದ್ಯರ ಕೊರತೆ ಇದ್ದು, ರೂ 80 ಸಾವಿರ ವೇತನ ಕೊಡುತ್ತೇವೆ ಎಂದರೂ ವೈದ್ಯರು ಬರುತ್ತಿಲ್ಲ. ವೈದ್ಯಕೀಯ ಶಿಕ್ಷಣ ಪಡೆದವರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೃತ್ತಿ ಮಾಡಬೇಕು ಎಂಬ ಕಾನೂನು ಜಾರಿಗೊಳಿಸುತ್ತಿದ್ದು, ಮುಂದೆ ಈ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ. ವೈದ್ಯರು ವೃತ್ತಿ ವ್ಯವಹಾರಿಕವಾಗಿ ನೋಡದೆ ಸಮಾಜ ಸೇವೆಯ ಮನೋಭಾವ ಹೊಂದಬೇಕು. ಕೇವಲ ಕಾನೂನುಗಳಿಂದ ವ್ಯವಸ್ಥೆ ಬದಲಾಯಿಸುವುದು ಕಷ್ಟ ಎಂದರು.

ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಜನ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿರುತ್ತಾರೆ. ಅವರ ಆಸೆಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮದಾಗಬೇಕಾಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ರೂ 600 ಕೋಟಿ ವೆಚ್ಚದಲ್ಲಿ ಶಾಲಾ- ಕಾಲೇಜು, ರಸ್ತೆ, ಕುಡಿಯುವ ನೀರು ಮತ್ತಿತರ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಒಂದು ದಿನವೂ ನನ್ನ ವೈಯಕ್ತಿಕ ಕೆಲಸಕ್ಕೆ ಸಮಯ ವ್ಯರ್ಥ ಮಾಡದಂತೆ ಕೆಲಸ ಮಾಡಿದ್ದೇನೆ. ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಬಗ್ಗೆ ಜನರ ಮೆಚ್ಚುಗೆಯ ಮಾತುಗಳು ನನಗೆ ಸ್ಫೂರ್ತಿಯಾಗಿವೆ ಎಂದು ಹೇಳಿದರು.

ಸಹಕಾರ ಸಚಿವ ಪುಟ್ಟಸ್ವಾಮಿ ಮಾತನಾಡಿ, ಶಾಸಕ  ಚಂದ್ರಪ್ಪ ಸಾಮಾಜಿಕ ಕಳಕಳಿಯ ವ್ಯಕ್ತಿ ಎಂಬುದಕ್ಕೆ ಇಲ್ಲಿನ ಕೆಲಸಗಳೇ ಸಾಕ್ಷಿ. ಇಷ್ಟು ಗುಣಮಟ್ಟದ ಆಕರ್ಷಕ ಆಸ್ಪತ್ರೆ ಕಟ್ಟಡ ಇಡೀ ರಾಜ್ಯದಲ್ಲಿಯೇ ಇಲ್ಲ. ಪಟ್ಟಣದ ಹೊರವಲಯದ ಹನುಮಂತ ದೇವರ ಕಣಿವೆಯಲ್ಲಿ ಸುಮಾರು ರೂ 100 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿರುವುದನ್ನು ನೋಡಿದೆ. ಕೇವಲ ಅನುದಾನ ಕೊಟ್ಟರೆ ಸಾಲದು. ಅದನ್ನು ಸಮರ್ಥವಾಗಿ ಬಳಸುವ ಜವಾಬ್ದಾರಿ ಬೇಕು. ಇದರಲ್ಲಿ ಶಾಸಕರ ಪರಿಶ್ರಮ ಎದ್ದು ಕಾಣುತ್ತದೆ. ಮುಂದೆ ಇವರು ಮಂತ್ರಿಯಾಗುವ ಮೂಲಕ ಹೆಚ್ಚು ಸೇವೆ ಸಲ್ಲಿಸುವ ಅವಕಾಶ ಸಿಗಲಿ ಎಂದು ಆಶಿಸಿದರು. 

ಸಂಸತ್ ಸದಸ್ಯ ಜನಾರ್ದನಸ್ವಾಮಿ ಮಾತನಾಡಿ, ಇಂದಿಗೂ ನಮ್ಮ ಆಸ್ಪತ್ರೆಗಳು ಕಸಾಯಿಖಾನೆಗಳಂತೆ ಇರುವುದು ದೊಡ್ಡ ದುರಂತ. ಎಲ್ಲ ವರ್ಗದ ಜನರಿಗೂ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಆಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷೆ ಭಾರತೀ, ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ. ಎಸ್.ಜೆ. ರಂಗಸ್ವಾಮಿ, ಇಂದಿರಾ ಕಿರಣ್, ಪಾರ್ವತಮ್ಮ, ಶಿವಕುಮಾರ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಗೀತಾ ಕೃಷ್ಣಮೂರ್ತಿ, ಲಕ್ಷ್ಮೀ, ಪಾರ್ವತಮ್ಮ, ಮೋಹನ್ ನಾಗರಾಜ್, ಲಿಂಗರಾಜು, ಚನ್ನಕೇಶವ, ಜಿ.ಪಂ. ಸಿಇಒ ಗೋಪಾಲ್, ಡಿಎಚ್‌ಒ ಡಾ.ಮಹಾಲಿಂಗಪ್ಪ, ಎಂ. ಶ್ರೀನಿವಾಸ್, ಪಣಿಯಪ್ಪ, ಇಸಾಕ್, ಮರುಳಸಿದ್ದಪ್ಪ, ಕೆ.ಸಿ. ರಮೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.