ADVERTISEMENT

ಶಿಕ್ಷಣವೇ ಅಭಿವೃದ್ಧಿಗೆ ಪೂರಕ: ಪ್ರೊ. ನರಸಿಂಹಯ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 6:35 IST
Last Updated 2 ಫೆಬ್ರುವರಿ 2011, 6:35 IST

ತರಬೇತಿ ಶಿಬಿರದ ಅರ್ಹತಾ ಪತ್ರ ವಿತರಣೆ ಕಾರ್ಯಕ್ರಮ
ಚಿತ್ರದುರ್ಗ: ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವ ಮೂಲಕ ಸವಿತಾ ಸಮಾಜ ಅಭಿವೃದ್ಧಿ ಸಾಧಿಸಬೇಕು ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಪ್ರೊ.ಎನ್.ವಿ. ನರಸಿಂಹಯ್ಯ ಅಭಿಪ್ರಾಯಪಟ್ಟರು.ಮಂಗಳವಾರ ಐಎಂಎ ಸಭಾಂಗಣದಲ್ಲಿ ಜಿಲ್ಲಾ ಸವಿತಾ ಸಮಾಜ, ಸವಿತಾ ವಿವಿಧೋದ್ದೇಶ ಸಹಕಾರ ಸಂಘ ಮತ್ತು ಡಿ. ದೇವರಾಜ ಅರಸು ನಿಗಮದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2009-10ನೇ ಸಾಲಿನ ಸವಿತಾ ಸಮಾಜ ಅಭಿವೃದ್ಧಿ ಅಡಿಯಲ್ಲಿ ಪುರುಷರ ಬೇಸಿಕ್ ಸೌಂದರ್ಯವರ್ಧಕ ಮತ್ತು ಮಹಿಳೆಯರಿಗಾಗಿ ವೃತ್ತಿ ಆಧಾರಿತ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರದ ಅರ್ಹತಾ ಪತ್ರ ವಿತರಣೆ ಹಾಗೂ ಮುಕ್ತಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇವಲ ಶ್ರೀಮಂತಿಕೆಯಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ವಿದ್ಯೆಯಿಂದ ಮಾತ್ರ ಎಲ್ಲವನ್ನೂ ಪಡೆಯಬಹುದು. ಮೇಧಾವಿಗಳಾಗುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ಕಿವಿಮಾತು ಹೇಳಿದರು.ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಈ ತರಬೇತಿ ಶಿಬಿರಗಳನ್ನು ಬಳಸಿಕೊಳ್ಳಬೇಕು. ಅಭಿವೃದ್ಧಿಗೆ ಪೂರಕವಾದ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಸವಿತಾ ಸಮಾಜಕ್ಕೆ ರೂ. 4ರಿಂದ `ರೂ.5 ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯದರ್ಶಿ ರಾಮಾಂಜನಪ್ಪ ಮಾತನಾಡಿ, ಸಮಾಜದ ಪ್ರಾಮಾಣಿಕತೆಯಿಂದ, ಸ್ವಾಭಿಮಾನದಿಂದ ಕ್ಷೌರಿಕ ವೃತ್ತಿಯಲ್ಲಿ ತೊಡಗಿದೆ. ಸಮಾಜದ ಜನಸಂಖ್ಯೆ 50 ಲಕ್ಷ ಇದ್ದರೂ, ಸದಸ್ಯತ್ವದ ಪ್ರಮಾಣದ ಅತಿ ಕಡಿಮೆ. ಎಲ್ಲರೂ ಸದಸ್ಯತ್ವ ಪಡೆಯಬೇಕು ಎಂದು ಹೇಳಿದರು.ಇಂದಿನ ರಾಜಕೀಯ ಸನ್ನಿವೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಅಸಾಧ್ಯ ಆಗಿರುವುದರಿಂದ ರಾಜಕೀಯ ಸ್ಥಾನಮಾನ ನೀಡಲು ಜನಾಂಗದವರನ್ನು ನಾಮನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಕೆ. ಬಸವರಾಜನ್, ಎಲ್ಲರಿಗೂ ಅಗತ್ಯವಿರುವ ಸೇವೆಯನ್ನು ಸವಿತಾ ಸಮಾಜ ಒದಗಿಸುತ್ತಿದ್ದರೂ ನಿಕೃಷ್ಟವಾಗಿ ಕಾಣುತ್ತಿರುವುದು ಪ್ರಜ್ಞಾವಂತ ಸಮಾಜಕ್ಕೆ ಅವಮಾನ. ಇದು ಮನುಷ್ಯತ್ವವೇ ಅಲ್ಲ. ಮೃಗತ್ವವನ್ನು ತೋರಿಸುತ್ತದೆ. ಆದ್ದರಿಂದ, ವಿಶಾಲ ಮನೋಭಾವದಿಂದ ಪ್ರತಿಯೊಬ್ಬರನ್ನು ಕಾಣಬೇಕು ಎಂದು ನುಡಿದರು.

ಆಧುನಿಕ ಸಲಕರಣೆಗಳು ಮತ್ತು ಸೌಂದರ್ಯ ವರ್ಧಕಗಳನ್ನು ಬಳಸಿಕೊಂಡು ಹೆಚ್ಚಿನ ಗಳಿಕೆ ಮಾಡಬೇಕು. ಇತರೆ ಸಮಾಜದ ಮಹಿಳೆಯರು ಇಂದು ಬ್ಯೂಟಿ ಪಾರ್ಲರ್ ತೆರೆಯುವ ಮೂಲಕ ಸವಿತಾ ಸಮಾಜದವರಿಗೆ ಸ್ಪರ್ಧೆವೊಡ್ಡುತ್ತಿರುವುದು ಕಂಡು ಬರುತ್ತಿದೆ. ಕುಲಕಸುಬಿನಲ್ಲಿ ಪರಿಣತಿ ಪಡೆದಿರುವ ಸಮಾಜದ ಮಹಿಳೆಯರು ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅವಮರ್ಯಾದೆಗೆ ಕಿವಿಗೊಡದೆ ಧೈರ್ಯದಿಂದ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಶಾಸಕರು, ಸಮಾಜದ ವೋಟ್‌ಬ್ಯಾಂಕ್ ಇಲ್ಲದ ಕಾರಣ ರಾಜಕೀಯ ಸ್ಥಾನಮಾನ ದೊರೆಯುವುದು ಕಷ್ಟಕರ. ಆದ್ದರಿಂದ  ಸರ್ಕಾರದ ಸವಿತಾ ಸಮಾಜದವರನ್ನು ವಿಧಾನ ಪರಿಷತ್‌ಗೆ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.ಸವಿತಾ ಸಮಾಜದ ಕಟ್ಟಡಕ್ಕೆ ತಮ್ಮ ಅನುದಾನದಲ್ಲಿ ` 5 ಲಕ್ಷ ನೀಡುವುದಾಗಿ ಶಾಸಕರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸವಿತಾ ಸಮಾಜ ಅಧ್ಯಕ್ಷ ಸಂಪತ್‌ಕುಮಾರ್, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಚ್.ಎನ್. ರವಿಕುಮಾರ್, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಎ. ಲಕ್ಷ್ಮೀನಾರಾಯಣಪ್ಪ, ಬೆಂಗಳೂರು ನಗರ ಅಧ್ಯಕ್ಷ ವಿ.ಕೃಷ್ಣಮೂರ್ತಿ, ಸಮಾಜದ ಮುಖಂಡರಾದ ಆರ್. ವೇಣುಗೋಪಾಲ್, ವೀರಣ್ಣ ಚೌಧರಿ, ಟಿ.ಎನ್. ನಾಗರಾಜು, ವಜ್ರಪ್ಪ, ಜಿ.ಎನ್. ಲಿಂಗರಾಜ್, ಎನ್. ಚಂದ್ರಶೇಖರ್, ಎಸ್. ರಾಮದಾಸ್, ಎ. ವೇಣುಗೋಪಾಲ್, ಎಂ. ಮಾರಣ್ಣಹಾಜರಿದ್ದರು. ಜಿಲ್ಲಾ ಸವಿತಾ ಸಮಾಜದ ಕಾರ್ಯದರ್ಶಿ ಎನ್.ಡಿ. ಕುಮಾರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.