ADVERTISEMENT

`ಸದೃಢ ಮಕ್ಕಳಿಂದ ಸ್ವಸ್ಥ ಸಮಾಜ ನಿರ್ಮಾಣ'

ಕಬ್ಬಿಣಾಂಶದ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಇಕ್ಕೇರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 8:31 IST
Last Updated 18 ಜುಲೈ 2013, 8:31 IST

ಚಿತ್ರದುರ್ಗ: `ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಆರು ವರ್ಷದವರೆಗಿನ 3 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತ್ದ್ದಿದಾರೆ. ಅಪೌಷ್ಟಿಕತೆ ನಿವಾರಣೆಗಾಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಹಾಗೂ ಹದಿಹರೆಯದವರಿಗೆ ಕಬ್ಬಿಣಾಂಶವಿರುವ ಮಾತ್ರೆಗಳನ್ನು ವಿತರಿಸಲಾಗುತ್ತಿದೆ' ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಹದಿಹರೆಯದವರಿಗೆ ಕಬ್ಬಿಣಾಂಶದ ಮಾತ್ರೆಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಡವರು, ಕೂಲಿಕಾರ್ಮಿಕರ ಮಕ್ಕಳೇ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂಥ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಜಿಲ್ಲೆಯ 2.08 ಲಕ್ಷ ಮಕ್ಕಳು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಐವರು ಬಾಲಕಿಯರಿಗೆ ಸಾಂಕೇತಿಕವಾಗಿ ಕಬ್ಬಿಣಾಂಶದ ಫೋಲಿಕ್ ಆಸಿಡ್ ಮಾತ್ರೆಗಳನ್ನು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ವಿತರಿಸಿದರು. ಬಳಿಕ ಮಾತನಾಡಿ, 20 ವರ್ಷಗಳಿಂದ ಮಕ್ಕಳಲ್ಲಿರುವ ಅಪೌಷ್ಟಿಕತೆ ಬಗ್ಗೆ ಅಧ್ಯಯನ ನಡೆಸಿ, ದೊರೆತ ಫಲಿತಾಂಶದ ಆಧಾರದ ಮೇಲೆ ಈ ಯೋಜನೆ ರೂಪಿಸಲಾಗಿದೆ. ಹೆಣ್ಣು ಮಕ್ಕಳಲ್ಲಿ ಋತುಚಕ್ರದ ಸಮಯದಲ್ಲಿ ಉಂಟಾಗುವ ಪ್ರಕ್ರಿಯೆಯಿಂದ ರಕ್ತಹೀನತೆ ಉಂಟಾಗುತ್ತದೆ. ಹೆಣ್ಣು ಮಕ್ಕಳು ಆರೋಗ್ಯವಂತರಾಗಿದ್ದರೆ ಆರೋಗ್ಯವಂತ ಮಕ್ಕಳು ಹುಟ್ಟುತ್ತವೆ. ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ' ಎಂದು ಆಶಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುಧಾ, `ರಕ್ತಹೀನತೆ ಹಾಗೂ ಕಬ್ಬಿಣಾಂಶ ಕೊರತೆಯನ್ನು ನೀಗಿಸಲು ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇಂದು ಏಕಕಾಲಕ್ಕೆ ಈ ಯೋಜನೆಗೆ ಚಾಲನೆ ನೀಡಲಾಗಿದೆ' ಎಂದು ವಿವರಿಸಿದರು.

ರಕ್ತಹೀನತೆಯಿಂದ ಮಕ್ಕಳಲ್ಲಿ ಗ್ರಹಿಕೆಯ ಶಕ್ತಿ ಕುಂಠಿತವಾಗುತ್ತದೆ. ನೆನಪಿನ ಶಕ್ತಿಯೂ ಕುಂದುತ್ತದೆ. ಮಾತ್ರವಲ್ಲ, ಭವಿಷ್ಯದಲ್ಲಿ ಹೆಣ್ಣುಮಕ್ಕಳು ಗರ್ಭಪಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಅಲ್ಲದೇ ಜನಿಸುವ ಮಕ್ಕಳು ಸರಿಯಾದ ತೂಕ ಹೊಂದುವುದಿಲ್ಲ. ಆದ್ದರಿಂದ ಸರ್ಕಾರ 6ರಿಂದ 10 ಹಾಗೂ 10ರಿಂದ 19ರ ವಯೋಮಾನದ ಮಕ್ಕಳಿಗೆ ವಾರಕ್ಕೊಮ್ಮೆ ಕಬ್ಬಿಣಾಂಶವಿರುವ ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡುತ್ತಿದೆ.

ಜಂತುಹುಳು ಮಾತ್ರೆ ಅಲ್‌ಬೆಂಡೋಜನ್‌ನನ್ನು ವರ್ಷದಲ್ಲಿ ಎರಡು ಸಲ (ಆಗಸ್ಟ್ ಹಾಗೂ ಫೆಬ್ರುವರಿಯಲ್ಲಿ) ನೀಡಲಾಗುತ್ತದೆ' ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.