ಚಿತ್ರದುರ್ಗ: ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಬಣಜಾರ ಬಾಲಕಿಯರ ವಿದ್ಯಾರ್ಥಿನಿಲಯದ ಮಹಾಸಭೆ ಆಯೋಜಿಸಲು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಜಿ.ಪಂ. ಸದಸ್ಯ ರಾಜಾನಾಯ್ಕ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಸೋಮವಾರ ಬೆಳಿಗ್ಗೆ 11.30ಕ್ಕೆ ಬಂಜಾರ ಬಾಲಕಿಯರ ವಿದ್ಯಾರ್ಥಿ ನಿಲಯದ ಮಹಾಸಭೆಯನ್ನು ಸಂಸ್ಥೆಯ ಉಪಾಧ್ಯಕ್ಷೆ ಸೀತಾಬಾಯಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಆದರೆ, ಸಭೆ ಆಯೋಜಿಸದಂತೆ ಪೊಲೀಸರು ಸೂಚಿಸಿದಾಗ ಮುಖಂಡರ ಜತೆ ಮಾತಿನ ಚಕಮಕಿ ನಡೆಯಿತು.
‘ತಮಗೆ ಅನಗತ್ಯವಾಗಿ ಅವಕಾಶ ನಿರಾಕರಿಸಲಾಗುತ್ತಿದೆ. ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳು ತಮ್ಮ ಬಳಿ ಇದ್ದು, ಸಭೆ ನಡೆಸಲು ಅವಕಾಶ ನೀಡಬೇಕು’ ಎಂದು ರಾಜಾನಾಯ್ಕ ಮತ್ತಿತರರು ಆಗ್ರಹಿಸಿದರು.
ಪೊಲೀಸರ ಕ್ರಮ ಖಂಡಿಸಿ ಕೆಲಕಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಭೆಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಅವರು ಮಧ್ಯಪ್ರವೇಶಿಸಿ ಮುಖಂಡರ ಮನವೊಲಿಸಿದರು.
ವಿದ್ಯಾರ್ಥಿನಿಲಯದ ಆವರಣದಲ್ಲಿ ಸಭೆ ನಡೆಸಿದ ಮುಖಂಡರು ಜಿಲ್ಲಾ ಬಣಜಾರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅಧ್ಯಕ್ಷರಾಗಿ ಡಾ. ತುಳಾಜಾಕ್ಷಾಬಾಯಿ ಮತ್ತು ಉಪಾಧ್ಯಕ್ಷರನ್ನಾಗಿ ಸೀತಾಬಾಯಿ ಹಾಗೂ ಕಾರ್ಯದರ್ಶಿಯನ್ನಾಗಿ ಕೋಕಿಲಾಬಾಯಿ ಅವರನ್ನು ಆಯ್ಕೆ ಮಾಡಿದರು ಎಂದು ರಾಜಾನಾಯ್ಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.