ಧರ್ಮಪುರ: ಸಮೀಪದ ಈಶ್ವರಗೆರೆ ಗ್ರಾಮ ಮೂಲಸೌಕರ್ಯಗಳಿಂದ ದೂರವಿದ್ದು, ಸಮಸ್ಯೆಗಳ ಆಗರವಾಗಿದೆ.
ಹಿರಿಯೂರು- ಧರ್ಮಪುರ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಈಶ್ವರಗೆರೆ ಗ್ರಾಮ ಪಂಚಾಯ್ತಿಯ ಕೇಂದ್ರವೂ ಹೌದು. ಆದರೆ, ಅಭಿವೃದ್ಧಿ ವಿಚಾರದಲ್ಲಿ ಇದು ಹಿಂದುಳಿದಿದೆ.
ಈಶ್ವರಗೆರೆ ಗ್ರಾಮ 500 ಮನೆಗಳನ್ನು ಹೊಂದಿದ್ದು, ಸುಮಾರು 4 ಸಾವಿರ ಜನಸಂಖ್ಯೆ ಇದೆ. ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಜನಾಂಗದವರು ಹೆಚ್ಚಿದ್ದು, ಕೂಲಿಯೇ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದೆ. ಇಲ್ಲಿ 700 ಗುಡಿಸಲುಗಳು ಇವೆ. ಗ್ರಾಮದಲ್ಲಿ ಕೆಲವೇ ಸಿಮೆಂಟ್ ರಸ್ತೆಗಳಿವೆ.
ಉಳಿದಂತೆ ಬಹುತೇಕ ರಸ್ತೆಗಳು ಹಾಳಾಗಿದ್ದು, ರಾತ್ರಿ ವೇಳೆ ಇಲ್ಲಿ ಸಂಚರಿಸುವುದೇ ಕಷ್ಟ ಎಂದು ಈಶ್ವರಗೆರೆ ಗ್ರಾಮ ಪಂಚಾಯ್ತಿ ಸದಸ್ಯ ನಾಗೇಂದ್ರಪ್ಪ ದೂರುತ್ತಾರೆ.
ಈ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಇಡೀ ಗ್ರಾಮದಲ್ಲಿ ಎರಡು ಓವರ್‌ಹೆಡ್ ಟ್ಯಾಂಕ್‌ಗಳಿವೆ. 6 ಕೈ ಪಂಪುಗಳಿದ್ದು, ಅವುಗಳಲ್ಲಿ ನೀರು ಅಲಭ್ಯ. ಇನ್ನು ಕುಡಿಯುವ ನೀರಿನಲ್ಲಿ ಯೆಥೇಚ್ಚವಾಗಿ ಪ್ಲೋರೈಡ್ ಅಂಶವಿದ್ದು ವಿವಿಧ ರೋಗಗಳಿಗೆ ಎಡೆ ಮಾಡಿಕೊಟ್ಟಿದೆ. ಅದಕ್ಕಾಗಿ ಕುಡಿಯುವ ನೀರು ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು ಎಂದು ಗ್ರಾಮದ ರಂಗಸ್ವಾಮಿ ಆಗ್ರಹಿಸಿದ್ದಾರೆ.
ಒಳಚರಂಡಿ: ಗ್ರಾಮದಲ್ಲಿ ಸರಿಯಾದ ರಸ್ತೆ, ಒಳಚರಂಡಿ ಇಲ್ಲ. ಮಳೆ ಬಂತೆಂದರೆ ನೀರು ರಸ್ತೆಮೇಲೆ ಹರಿಯುತ್ತದೆ. ನೀರಿನ ಪೈಪ್‌ಲೈನ್ ಒಡೆದು ನೀರು ಸಂಗ್ರಹವಾಗಿ ಹಂದಿಗಳ ಮತ್ತು ಸೊಳ್ಳೆಗಳ ಆಶ್ರಯ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.
ಗ್ರಾಮ ಪಂಚಾಯ್ತಿ: ಸ್ಥಳೀಯ ಆಡಳಿತದ ಜವಾಬ್ದಾರಿ ಹೊತ್ತಿರುವ ಗ್ರಾಮ ಪಂಚಾಯ್ತಿಯ ಕಟ್ಟಡವೇ ಕಳಪೆ ಕಾಮಗಾರಿಯಿಂದಾಗಿ ಬೀಳುವ ಹಂತದಲ್ಲಿದೆ ಎನ್ನುತ್ತಾರೆ ಗ್ರಾಮದ ಮಲ್ಲಿಕಾರ್ಜುನ.
ಗ್ರಾಮದಲ್ಲಿ ಒಟ್ಟು ಮೂರು ಅಂಗನವಾಡಿ ಕೇಂದ್ರಗಳಿದ್ದು, ಎರಡಕ್ಕೆ ಮಾತ್ರ ಸ್ವಂತ ಕಟ್ಟಡ ಇದೆ. ಉಳಿದಂತೆ ಭೋವಿ ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕೊಠಡಿ ಇಲ್ಲ.
ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನಿವೇಶನ ಮತ್ತು ಮನೆಗಳ ನಿರ್ಮಾಣವಾಗಬೇಕು. ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಕವಾಗಬೇಕು. ಕೆರೆ ಏರಿ ಮೇಲೆ ಬೆಳೆದು ನಿಂತಿರುವ ಬಳ್ಳಾರಿ ಜಾಲಿ ಪೊದೆ ತೆಗೆದು ಕೆರೆಯಲ್ಲಿನ ಹೂಳು ತೆಗೆಸಬೇಕು ಎಂದು ರಾಮಣ್ಣ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.