ADVERTISEMENT

ಸಾಗುವಳಿಗೆ ಆಗ್ರಹಿಸಿ ಚೌಳೂರು ಕಾವಲ್‌ನಲ್ಲಿ ಸ್ಥಳೀಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 8:55 IST
Last Updated 20 ಆಗಸ್ಟ್ 2012, 8:55 IST

ಚಿತ್ರದುರ್ಗ: ಜಿಲ್ಲೆಯ ಪರಶುರಾಂಪುರ ಸಮೀಪದ ಚೌಳೂರು ಕಾವಲ್‌ನಲ್ಲಿ ಭಾನುವಾರ ನಡೆದ ಸಾಮೂಹಿಕ ಕೊಳವೆಬಾವಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಸಚಿವ ಎ. ನಾರಾಯಣ ಸ್ವಾಮಿ ಹಾಗೂ ಅತಿಥಿಗಳನ್ನು ಸ್ಥಳೀಯರು, ಸಾಗುವಳಿ ಮಾಡಿಸಿಕೊಡುವಂತೆ ಆಗ್ರಹಿಸಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆಯಿತು.

ಚೌಳೂರು ಕಾವಲ್‌ನ ಡಾ.ಬಾಬು ಜಗಜೀವನ್‌ರಾಂ ಅಗ್ರಿಕಲ್ಚರ್ ಕಲೆಕ್ಟಿವ್ ಫಾರ‌್ಮಿಂಗ್ ಕೋ ಆಫ್ ಸೊಸೈಟಿ ಹಾಗೂ ದಲಿತ ಸಂಘರ್ಷ ಸಮಿತಿ (ಟಿ.ಡಿ. ಆರ್. ಬಣ) ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆ ಅಡಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಮುಂಜೂರಾಗಿದ್ದ ಸಾಮೂಹಿಕ ಕೊಳವೆಬಾವಿ ಉದ್ಘಾಟನೆ ಸಂದರ್ಭದಲ್ಲಿ, ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಮತಿನ ಚಕಮಕಿ ನಡೆಯಿತು.

ಸಚಿವರ ಸಮ್ಮಖದಲ್ಲಿಯೇ ಎರಡು ಬಣಗಳು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದವು. ಇದರಿಂದ ಮುಜುಗರಕ್ಕೆ ಒಳಗಾದ ಸಚಿವರು ಮತ್ತು ಅತಿಥಿಗಳು, ಸಾಂಕೇತಿಕವಾಗಿ ಉದ್ಘಾಟಿಸಿ, ವೇದಿಕೆಗೆ ಆಗಮಿಸದೇ ವಾಪಸ್ ಹೋದರು.

ಅತೃಪ್ತ ಗುಂಪಿನವರು ಸಚಿವರು ವಾಪಾಸ್ ಹೋಗುವಾಗ ಕಾರ್ ಅಡ್ಡಗಟ್ಟಿ ಪ್ರತಿಭಟಿಸಿದರು. ಕೊಳವೆಬಾವಿ ಕೊರೆಸಿಕೊಡುವುದಕ್ಕಿಂತ ಮುಖ್ಯವಾಗಿ ಜಮೀನನ್ನು ತಮ್ಮ ಹೆಸರಿಗೆ ಸಾಗುವಳಿ ಮಾಡಿಸಿಕೊಡಬೇಕು ಎಂದು ಕೇಳಿಕೊಂಡರು. ಈಗ ಮುಂಜೂರಾಗಿರುವ ಫಲಾನುಭವಿಗಳ ಪಟ್ಟಿಯಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಎರಡು-ಮೂರು ಹೆಸರುಗಳಿವೆ. ಅದನ್ನು ಸರಿಪಡಿಸಬೇಕು. ಒಂದು ಕುಟುಂಬಕ್ಕೆ ಒಂದೇ ಕೊಳವೆಬಾವಿ ಮುಂಜೂರು ಮಾಡಿಕೊಡುವಂತೆ ಆಗ್ರಹಿಸಿದರು.

ಸಚಿವರಿಂದ ಸರಿಯಾದ ಉತ್ತರ ದೊರೆಯದಿದ್ದಾಗ ಆಕ್ರೋಶಗೊಂಡ ಜನರು, ಅವರ ವಿರುದ್ಧ ಘೋಷಣೆ ಕೂಗಿದರು. ಸಚಿವರ ಕಾರಿಗೆ ಮಣ್ಣನ್ನು ತೂರಿ `ಅಯ್ಯಯ್ಯೋ ಅನ್ಯಾಯ ಸರಿಪಡಿಸಿ~ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ತಡೆದರಿಂದ. ಇದರಿಂದ ನೂಕುನುಗ್ಗಲು ಉಂಟಾಯಿತು. ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಗುಂಪು ಚದುರಿಸಲು ಲಾಠಿಪ್ರಹಾರ ನಡೆಸಬೇಕಾಯಿತು. ನಂತರವಷ್ಟೇ ಪರಿಸ್ಥಿತಿ ಹತೋಟಿಗೆ ಬಂದಿತು.

ಕಾರ್ಯಕ್ರಮಕ್ಕೆ ಸಚಿವರಿಗಿಂತ ಸ್ವಲ್ಪ ಮುಂಚಿತವಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ರವಿಕುಮಾರ್ ಅವರನ್ನು ಸಹ, ಮಹಿಳೆಯರು ಹಾಗೂ ಯುವಕರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.

ಇಂದಿಗೂ ಅಸಮಾನತೆ ಇದೆ
ಸ್ವಾತಂತ್ರ್ಯ ಬಂದು 65 ವರ್ಷಗಳಾಗಿದ್ದರೂ  ದಲಿತರು, ಹಿಂದುಳಿದವರಲ್ಲಿ ಇಂದಿಗೂ ಅಸಮಾನತೆ ಕಾಣುತ್ತಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಟಿ.ಡಿ. ರಾಜಗಿರಿ ಮಾತನಾಡಿದರು.
ಸಾಮೂಹಿಕ ಕೊಳವೆಬಾವಿ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲ್ಲಿನ 1,054 ಎಕರೆ ಪ್ರದೇಶದಲ್ಲಿ ಸುಮಾರು 236 ಕೊಳವೆಬಾವಿಗಳು ಮುಂಜೂರಾಗಿವೆ. ಸಮಾಜದ ಬಂಧುಗಳು ಇದರ ಉಪಯೋಗ ಪಡೆಯಬೇಕು. ನ್ಯಾ.ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿಯನ್ನು ಜಾರಿಗೊಳಿಸಬೇಕು. ಸಮಗ್ರ ಬೇಸಾಯ ಅಭಿವೃದ್ಧಿ ಯೋಜನೆ ಜಾರಿಗೊಳಿಸಬೇಕು. ಸರ್ಕಾರದಲ್ಲಿ ಖಾಲಿ ಇರುವ ಸುಮಾರು 36 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖಂಡ ಸಿ.ಜಿ. ಜಯಕುಮಾರ್ ಮಾತನಾಡಿ, ನಾವು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯೆ ಭಾಗ್ಯಮ್ಮ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಓ. ನರಸಿಂಹಮೂರ್ತಿ, ರಂಗಸ್ವಾಮಿ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.