ಹಿರಿಯೂರು: ನಗರದ ಶ್ರೀ ಹನುಮತ್ ಶಕ್ತಿ ಜಾಗರಣಾ ಸಮಿತಿ ವತಿಯಿಂದ ಹಿಂದೂ ಸಮಾಜೋತ್ಸವದ ಅಂಗವಾಗಿ ಸೋಮವಾರ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.
ಉತ್ಸವದಲ್ಲಿ ಪಾಲ್ಗೊಂಡಿದ್ದ ಹಿಂದೂ ಸಹೋದರರಿಗೆ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ, ಚಪ್ಪರ ನಿರ್ಮಿಸಿ ತಂಪು ಪಾನೀಯ ವಿತರಣೆ ಮಾಡಿ ಶುಭ ಹಾರೈಸುವ ಮೂಲಕ ಹಿರಿಯೂರಿನ ಮುಸಲ್ಮಾನರು ಸಹೋದರತ್ವವನ್ನು ಎತ್ತಿಹಿಡಿದರು.
ಮುಖಂಡರಾದ ಜಬೀವುಲ್ಲಾ, ಫಕೃದ್ದೀನ್, ಪಿ.ಎಸ್. ಸಾದತ್‌ವುಲ್ಲಾ ಮೊದಲಾದವರು ಉಪಸ್ಥಿತರಿದ್ದರು.ಉತ್ಸವದಲ್ಲಿ ಶ್ರೀರಾಮನ ವೇಷ ಧರಿಸಿದ್ದ ಯುವಕ ಎ. ನಾಗೇಶ್ ಎಲ್ಲರ ಗಮನ ಸೆಳೆದರು. ಗೋಪಾಲಪುರ ಬಡಾವಣೆಯಲ್ಲಿ ಹತ್ತಾರು ಮಹಿಳೆಯರು ರಾಮನ ಪಾತ್ರಧಾರಿಗೆ ಹೂಮಾಲೆ ಹಾಕಿ, ನಮಸ್ಕರಿಸಿದ್ದೂ ನಡೆಯಿತು.
ಸಿದ್ಧನಾಯಕ ವೃತ್ತದ ಆಂಜನೇಯ ಸ್ವಾಮಿ ದೇಗುಲದಿಂದ ಹೊರಟ ಮೆರವಣಿಗೆ, ಗೋಪಾಲಪುರ ಬಡಾವಣೆ, ಬಸ್‌ನಿಲ್ದಾಣದ ಪಕ್ಕದ ರಸ್ತೆ, ಪ್ರಧಾನರಸ್ತೆ, ಚರ್ಚ್‌ರಸ್ತೆ, ಹುಳಿಯಾರು ರಸ್ತೆ ಮೂಲಕ ನೆಹರು ಮೈದಾನಕ್ಕೆ ಆಗಮಿಸಿತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.