ADVERTISEMENT

ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 5:50 IST
Last Updated 20 ಫೆಬ್ರುವರಿ 2012, 5:50 IST
ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ
ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ   

ಚಿತ್ರದುರ್ಗ: ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರಿಗೆ ಸೇವಾ ಭದ್ರತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಮುಖ್ಯರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಫೆಡರೇಷನ್ ಕಾರ್ಯಕರ್ತರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ತಮಿಳುನಾಡು ಮಾದರಿಯಲ್ಲಿಯೇ ಅಡುಗೆ ಸಿಬ್ಬಂದಿಯನ್ನು ಅರೆಕಾಲಿಕ ಕಾಯಂ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಸಾಮಾಜಿಕ ಭದ್ರತೆ ಒದಗಿಸಬೇಕು, ಯೋಜನೆ ಕೈಪಿಡಿಯಂತೆ ಮಕ್ಕಳ ಸಂಖ್ಯೆ ಅನುಗುಣವಾಗಿ ಸಿಬ್ಬಂದಿಯನ್ನು ಮುಂದುವರಿಸಬೇಕು, ಹಾಲಿ ಬದಲಾವಣೆಯಿಂದ ಸುಮಾರು 6 ಸಾವಿರ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಆದ್ದರಿಂದ, ಸಿಬ್ಬಂದಿ ಕಡಿತಗೊಳಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರಸಕ್ತ ಬೆಲೆ ಏರಿಕೆಗೆ ಅನುಗುಣವಾಗಿ ಮುಖ್ಯ ಅಡುಗೆಯವರಿಗೆ ರೂ. 5 ಸಾವಿರ, ಇತರೆ ಸಿಬ್ಬಂದಿಗೆ ರೂ. 4 ಸಾವಿರ ಸಂಭಾವನೆ ನಿಗದಿಪಡಿಸಬೇಕು, ನಿವೃತ್ತಿ ವೇತನ, ಅಪಘಾತ ಪರಿಹಾರ, ಹೆರಿಗೆ ಮತ್ತು ವೈದ್ಯಕೀಯ ಭತ್ಯೆ ನೀಡಬೇಕು, ಭವಿಷ್ಯನಿಧಿ, ಇಎಸ್‌ಐ ಯೋಜನೆ ಜಾರಿಗೊಳಿಸಬೇಕು, ವಾರ್ಷಿಕ ರಜೆಯನ್ನು ಇಪ್ಪತ್ತು ದಿನಗಳು ನೀಡಬೇಕು ಹಾಗೂ ಬ್ಯಾಂಕ್‌ಗಳಲ್ಲಿ ಅಡುಗೆ ಸಿಬ್ಬಂದಿಗಳಿಗೆ ಶೂನ್ಯ ಮೊತ್ತದ ಖಾತೆ ತೆಗಿಸಿ ಮಾಸಿಕ ಸಂಭಾವನೆಯನ್ನು ಪ್ರತಿ ತಿಂಗಳು 5ರ ಒಳಗೆ ಚೆಕ್ ಮೂಲಕ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಜಿ. ಚಂದ್ರಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬಿ.ವೈ. ರಾಜಣ್ಣ, ಎಂ.ಬಿ. ಜಯದೇವಮೂರ್ತಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.