ADVERTISEMENT

ಸೋಲೇ ಗೆಲುವಿನ ವೆುಟ್ಟಿಲು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 8:35 IST
Last Updated 18 ಆಗಸ್ಟ್ 2012, 8:35 IST

ಭರಮಸಾಗರ: ಸೋಲು ಗೆಲುವಿನ ಮೆಟ್ಟಿಲಾಗಬೇಕು. ಗೆಲುವು ಇನ್ನಷ್ಟು ಸಾಧನೆಗೆ ಸ್ಪೂರ್ತಿಯಾಗಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರಘಾ ಶರಣರು ತಿಳಿಸಿದರು.

 ಇಲ್ಲಿನ ಬಾಪೂಜಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಬಾಪೂಜಿ ಪ್ರೌಢಶಾಲೆ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ನಮ್ಮಲ್ಲಿನ ಜಡತ್ವ ದೂರಾಗಿ ಕ್ರಿಯಾಶೀಲ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಕ್ರೀಡಾಕೂಟಗಳು ವಿದ್ಯಾರ್ಥಿಗಳನ್ನು ಚೈತನ್ಯ ಮೂರ್ತಿಗಳನ್ನಾಗಿಸಿ ಅವರಲ್ಲಿನ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಒದಗಿಸುತ್ತವೆ ಎಂದರು. ಭಾರತದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಆದರೆ, ಇಲ್ಲಿನ ಕ್ರೀಡಾಲೋಕದ ರಾಜಕೀಯದಿಂದಾಗಿ ಅರ್ಹ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿವೆ ಎಂದು ವಿಷಾದಿಸಿದರು.

ಚೀನಾದಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳ ಕ್ರೀಡಾ ಬೆಳವಣಿಗೆಗೆ ಪೂರಕವಾದ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಾಗಾಗಿ ಒಲಿಂಪಿಕ್‌ಸ್ಪರ್ಧೆಗಳಲ್ಲಿ ಆ ದೇಶ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಅಂತಹ ವ್ಯವಸ್ಥೆ ನಮ್ಮ ದೇಶದಲ್ಲೂ ಜಾರಿಗೆ ಬರಬೇಕು ಎಂದು ಹೇಳಿದರು.

ಎಸ್‌ಜೆಎಂ ವಿದ್ಯಾಪೀಠದ ನಿರ್ದೇಶಕ ಡಿ.ವಿ. ಶರಣಪ್ಪ ಮಾತನಾಡಿದರು. ಸಕ್ಲೇನ್ ಪಾಷಾ, ಈಶಣ್ಣ, ಮುಖ್ಯ
ಶಿಕ್ಷಕ ಜಗದೀಶ್, ಪ್ರಾಂಶುಪಾಲ ಮೃತ್ಯುಂಜಯ, ವಿವಿಧ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.