ADVERTISEMENT

ಸ್ವಸಹಾಯ ಸಂಘಕ್ಕೆ ಸುತ್ತುನಿಧಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 6:25 IST
Last Updated 18 ಜುಲೈ 2012, 6:25 IST

ಹಿರಿಯೂರು: ತಾಲ್ಲೂಕಿನ 70 ಮಹಿಳಾ ಸ್ವಸಹಾಯ ಸಂಘಗಳಿಗೆ ತಲಾ ರೂ 28 ಸಾವಿರದಂತೆ ಒಟ್ಟು ರೂ 19.60 ಲಕ್ಷ ಬಿಡುಗಡೆ ಮಾಡಿಸಿರುವುದಾಗಿ ಶಾಸಕ ಡಿ. ಸುಧಾಕರ್ ತಿಳಿಸಿದರು.

ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಸೋಮವಾರ ಮದರ್ ಸಂಸ್ಥೆ, ಜಲಾನಯನ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಸುತ್ತುನಿಧಿ ಚೆಕ್ ವಿತರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹಿರಿಯೂರು ತಾಲ್ಲೂಕಿಗೆ ಮಾತ್ರ ಇಷ್ಟೊಂದು ಪ್ರಮಾಣದ ಅನುದಾನ ಬಂದಿರುವುದು. ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಹಿಳಾ ಸಮುದಾಯ ಭವನ ನಿರ್ಮಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಶಾಲಾ-ಕಾಲೇಜುಗಳಿಗೆ ಅಗತ್ಯ ಕಟ್ಟಡ ಮತ್ತಿತರ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸದ್ಯದಲ್ಲಿಯೇ ತಮ್ಮ ಮೂರೂವರೆ ವರ್ಷಗಳ ಸಾಧನೆಯ ಪುಸ್ತಕ ಬಿಡುಗಡೆ ಮಾಡಲಿದ್ದೇನೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮೀ ಮಾತನಾಡಿ, ಮಹಿಳೆಯರು ಹಣಕ್ಕಾಗಿ ಮೈಮೇಲಿನ ಒಡವೆಗಳನ್ನು ಗಿರವಿ ಅಂಗಡಿಯಲ್ಲಿ ಒತ್ತೆ ಇಡುವುದು ಸಲ್ಲದು. ಬಹಳಷ್ಟು ಜನ ದುಬಾರಿ ಬಡ್ಡಿ ಪಾವತಿಸಲಾರದೆ ಒಡವೆಗಳನ್ನು ಕಳೆದುಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳ ಹತ್ತಿರ ಸಾಲ ಪಡೆದು ಮನೆ ಆಸ್ತಿ ಕಳೆದುಕೊಳ್ಳಬೇಡಿ. ಸ್ವಸಹಾಯ ಸಂಘ ರಚಿಸಿ, ಸರ್ಕಾರದ ಸೌಲಭ್ಯ ಬಳಸಿಕೊಂಡು ಆರ್ಥಿಕ ಸಂಕಷ್ಟದಿಂದ ಪಾರಾಗಿ.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಸಾಲಕ್ಕಾಗಿ ಮಕ್ಕಳನ್ನು ಜೀತಕ್ಕೆ ಕಳುಹಿಸಬಾರದು ಎಂದು ಸಲಹೆ ನೀಡಿದರು.ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಎ. ನಾರಾಯಣ್ ಮಾತನಾಡಿ, ಸುಜಲಾ ಜಲಾನಯನ ಯೋಜನೆಯಡಿ 70 ಸ್ವಸಹಾಯ ಸಂಘಗಳಿಗೆ ಈ ಹಿಂದೆ ರೂ 22 ಸಾವಿರ ಮತ್ತು ಈಗ 28 ಸಾವಿರ ಸೇರಿ ಒಟ್ಟು ರೂ 35 ಲಕ್ಷ ನೀಡಲಾಗಿದೆ. ಈ ಹಣವನ್ನು ಆದಾಯೋತ್ಪನ್ನ ಚಟುವಟಿಕೆ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

`ಮದರ್~ ಸಂಸ್ಥೆ ಯೋಜನಾ ನಿರ್ದೇಶಕ ಎಸ್.ಎಚ್. ವೀರಭಾಸ್ಕರ್ ಮಾತನಾಡಿದರು.
ಎಂ. ಅಸ್ಲಂ, ಎ.ಟಿ. ಶಿವಪ್ರಸಾದ್, ರೇಖಾ, ವೈ. ತಿಮ್ಮಯ್ಯ, ಆರ್. ಕೃಷ್ಣ, ಗೋಪಾಲ್, ಕೃಷ್ಣಮೂರ್ತಿ, ಮಾರುತಿ, ಆಲಿಮಾ ಹಾಜರಿದ್ದರು.

ಹೈನುಗಾರಿಕೆಗೆ ಸಲಹೆ
ರೇಷ್ಮೆ ಕೃಷಿ, ಹೈನುಗಾರಿಕೆ, ಕುಕ್ಕಟ ಪಾಲನೆ, ಜೇನು ಸಾಕಣೆ ಮೂಲಕ ಮನೆಯಲ್ಲಿದ್ದುಕೊಂಡೇ ಹಣ ಗಳಿಸುವ ಕೆಲಸಗಳನ್ನು ನಡೆಸಬೇಕು ಎಂದು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಕರೆ ನೀಡಿದರು.

ತಾಲ್ಲೂಕಿನ ಮಸ್ಕಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಕಾಲ ಈಗಿಲ್ಲ. ಪುರುಷರಿಗೆ ಸರಿ ಸಮಾನವಾಗಿ ಮಹಿಳೆಯರು ದುಡಿಯುತ್ತಿದ್ದಾರೆ.

ಬ್ಯಾಂಕುಗಳಿಂದ ಪಡೆಯುವ ಸಾಲ ನಿಗದಿತ ಉದ್ದೇಶಗಳಿಗೆ ಬಳಸುವಲ್ಲಿ ಹೆಣ್ಣು ಮಕ್ಕಳು ಮುಂದಿದ್ದಾರೆ. ಸಾಲ ಮರುಪಾವತಿಯೂ ಸಹ ಆಶಾದಾಯಕವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ರಂಗೇಗೌಡ, ಕೃಷ್ಣಯ್ಯ, ಲೋಕಣ್ಣ, ವೆಂಕಟಾಚಲ, ವಿ.ಎಲ್. ಗೌಡ, ಎಂ. ಆರ್. ಶಶಿಕುಮಾರ್, ಯು. ರಾಜಣ್ಣ, ಎಚ್. ಮರಿಗೌಡ್ರು, ಎಂ.ಪಿ. ವೆಂಕಟೇಶ್, ಕೆ. ಚಿದಾನಂದಪ್ಪ, ನಿಂಗಮ್ಮ, ಮಂಜುನಾಥ್, ಎಸ್. ದೇವರಾಜ್, ಎಂ. ನಿಂಗಣ್ಣ, ನರಸಿಂಹಮೂರ್ತಿ ಹಾಜರಿದ್ದರು. ರಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಎ. ರಾಮಚಂದ್ರಯ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.