ಚಿತ್ರದುರ್ಗ: ನೈಸರ್ಗಿಕವಾಗಿ ಹರಿಯುವ ಹಳ್ಳ, ಕೊಳ್ಳ, ಕಾಲುವೆಗಳ ಸಮೀಪ ಮನೆಗಳನ್ನು ನಿರ್ಮಿಸಿಕೊಳ್ಳಬಾರದು. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದರೆ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಲಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಲಹೆ ನೀಡಿದರು.
ನಗರದ ಹೊರ ವಲಯದ ವಿವೇಕಾನಂದ ಬಡಾವಣೆ ಬಳಿಯ ಚೆಕ್‌ಡ್ಯಾಂಗೆ ಭಾನುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಚೆಕ್‌ಡ್ಯಾಂ ಸುತ್ತ ಮುತ್ತ ಮನೆಗಳು ಮುಳುಗಡೆ ಆಗುವುದಿಲ್ಲ ಎನ್ನುವುದಾದರೆ ಎತ್ತರ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
ಮಳೆಗಾಲದಲ್ಲಿ ಬಿದ್ದ ಮಳೆಯ ನೀರನ್ನು ಪೋಲು ಮಾಡಬಾರದು. ಅಂತರ್ಜಲ ಮಟ್ಟ ವೃದ್ಧಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಬಡಾವಣೆಯ ನಿವಾಸಿ ಓಂಕಾರ್ ಮಾತನಾಡಿ, ಈ ಪ್ರದೇಶದಲ್ಲಿ ಮಳೆಯಾದಾಗ ಮನೆಗಳಿಗೆ ನೀರು ನುಗ್ಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆಂದು ಕೋರಿದರು. ರಸ್ತೆ, ಚರಂಡಿ, ಕುಡಿಯುವ ನೀರು ನೀಡುವುದರ ಜೊತೆಯಲ್ಲಿ ಹತ್ತಾರು ವರ್ಷಗಳಿಂದ ನೆಲೆಸಿರುವ ನಿವಾಸಿಗಳಿಗೆ ನಿವೇಶನದ ಹಕ್ಕುಪತ್ರ, ಆಶ್ರಯ ಮನೆ, ನಿವೇಶನ ನೀಡುವಂತೆ ಅವರು ಶಾಸಕರಲ್ಲಿ ಮನವಿ ಮಾಡಿದರು.
ಗುಡ್ಡದ ಸಮೀದಲ್ಲಿರುವುದರಿಂದ ಚಿರತೆ ಮತ್ತು ಕರಡಿಗಳ ಹಾವಳಿ ಜಾಸ್ತಿ ಇದ್ದು ಅರಣ್ಯ ಇಲಾಖೆಯವರು ಸೂಕ್ತ ರಕ್ಷಣೆ ನೀಡಬೇಕು. ಎರಡು ಸಲ ಚಿರತೆಗೆ ಬಲೆ ಹಾಕಲಾಗಿತ್ತು. ಆದರೆ, ಚಿರತೆ ಬಲೆಗೆ ಬಿದ್ದು ಚಾಣಕ್ಷತನದಿಂದ ತಪ್ಪಿಸಿಕೊಂಡು ಪರಾರಿಯಾಯಿತು.
ಇದರ ಜೊತೆಯಲ್ಲಿ ಕರಡಿಗಳು ಸಹ ದಾಳಿ ಇಡುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿದರು.ನಗರಸಭಾ ಸದಸ್ಯ ಮಹೇಶ್, ಸಾವಿತ್ರಮ್ಮ, ಶಾಂತಮ್ಮ, ಶಾರದಮ್ಮ, ಲಕ್ಷ್ಮಕ್ಕ, ಮಂಜುಳಾ, ಪಾರ್ವತಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.