ADVERTISEMENT

ಹಾಲುರಾಮೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ

ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಗೂಳಿಹಟ್ಟಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 11:24 IST
Last Updated 12 ಜೂನ್ 2018, 11:24 IST

ಹೊಸದುರ್ಗ: ತಾಲ್ಲೂಕಿನ ಪುರಾಣ ಪ್ರಸಿದ್ಧ ಹಾಲುರಾಮೇಶ್ವರ ಪುಣ್ಯಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಭರವಸೆ ನೀಡಿದರು.

ಹಾಲುರಾಮೇಶ್ವರ ಕ್ಷೇತ್ರದಲ್ಲಿ ಸುಮಾರು ₹12 ಲಕ್ಷ ವೆಚ್ಚದ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಬೇಕು ಎಂಬ ಉದ್ದೇಶದಿಂದ ನಾನು ಸಚಿವನಾಗಿದ್ದಾಗ ಇಲ್ಲಿನ ದೇಗುಲ ಕೆಡವಿಸಿದ್ದೆ. ಆದರೆ ನಂತರದಲ್ಲಿ ಅಧಿಕಾರಕ್ಕೆ ಬಂದವರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಜೀರ್ಣೋದ್ಧಾರ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಕ್ಷೇತ್ರವು ಮೂಲಸೌಕರ್ಯದಿಂದ ವಂಚಿತವಾಗಿರುವುದು ತೀವ್ರ ಬೇಸರ ಸಂಗತಿ’ ಎಂದರು.

ADVERTISEMENT

‘ಇಲ್ಲಿನ ಹಾಲುರಾಮೇಶ್ವರಸ್ವಾಮಿ, ಗಂಗಾಮಾತೆ ಆಶೀರ್ವಾದ ಹಾಗೂ ತಾಲ್ಲೂಕಿನ ಎಲ್ಲ ವರ್ಗದ ಮತದಾರರ ಸಹಕಾರದಿಂದ ಮತ್ತೆ ಕ್ಷೇತ್ರದ ಶಾಸಕನಾಗಿದ್ದೇನೆ. ಹಾಗಾಗಿ ಈ ಕ್ಷೇತ್ರದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸ್ವಂತ ಖರ್ಚಿನಲ್ಲಿ ಓವರ್‌ಹೆಡ್‌ ಟ್ಯಾಂಕ್‌ ಹಾಗೂ ಭಕ್ತರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣ ಮಾಡಿಸಲಾಗುತ್ತಿದೆ’ ಎಂದರು.

ವಿಧಾನಸಭೆ ಚುನಾವಣೆಗೂ ಮೊದಲು ಮತ ಕೇಳಲು ಕ್ಷೇತ್ರದ ಪ್ರತಿ ಗ್ರಾಮಕ್ಕೆ ಭೇಟಿ ನನಗೆ ಮತದಾನ ಮಾಡುವಂತೆ ಮನವಿ ಮಾಡಿದ್ದೆ. ಎಲ್ಲ ವರ್ಗದ ಮತದಾರರು ನನಗೆ ಸಹಕಾರ ಮಾಡಿ ಗೆಲ್ಲಿಸಿದ್ದಾರೆ. ಗೆದ್ದ ನಂತರ ಜನಪರ ಆಡಳಿತ ಮಾಡಲು ಜನಸಾಮಾನ್ಯರ ಸಲಹೆ, ಸಹಕಾರ ಪಡೆಯಲು ಪ್ರತಿ ಹಳ್ಳಿಗೆ ಭೇಟಿ ನೀಡುತ್ತಿದ್ದೇನೆ. ಜನರ ಅಹವಾಲು ಸ್ವೀಕರಿಸುವ ಮೂಲಕ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸು ತ್ತೇನೆ’ ಎಂದು ಭರವಸೆ ನೀಡಿದರು.

ಹೆಬ್ಬಳ್ಳಿ ಮಲ್ಲಿಕಾರ್ಜುನ್‌, ದ್ಯಾಮಣ್ಣ, ತಿಪ್ಪಯ್ಯ, ಹಕ್ಕಿತಿಮ್ಮಯ್ಯನ ಹಟ್ಟಿ ಮಲ್ಲೇಶ್‌, ನಾಗರಾಜು, ಕುಮಾರ್‌, ಮಂಜುನಾಥ್‌ ಹಾಜರಿದ್ದರು.

‘ಮೂಲಸೌಕರ್ಯಕ್ಕೆ ಆದ್ಯತೆ’

‘ತಾಲ್ಲೂಕಿನ ಹಲವು ಗ್ರಾಮಗಳು ಮೂಲಸೌಕರ್ಯದಿಂದ ವಂಚಿತವಾಗಿದ್ದು, ಅಂತಹ ಗ್ರಾಮಗಳಿಗೆ ರಸ್ತೆ, ಚರಂಡಿ, ಸಾರಿಗೆ, ವಿದ್ಯುತ್‌, ಕುಡಿಯುವ ನೀರು ಆರೋಗ್ಯ, ಶಿಕ್ಷಣದಂತಹ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು’ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.