ADVERTISEMENT

ಹಾಸ್ಟೆಲ್ ಅವ್ಯವಸ್ಥೆ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 9:00 IST
Last Updated 13 ಫೆಬ್ರುವರಿ 2011, 9:00 IST

ಧರ್ಮಪುರ:  ಬಾಗಿಲಿಲ್ಲದ ಶೌಚಾಲಯ... ಬಿದ್ದ ಕಸಕಡ್ಡಿ,  ನಿರ್ವಹಣೆ ಇಲ್ಲದ ಕಟ್ಟಡ...ಇವು ಧರ್ಮಪುರದ ಮೆಟ್ರಿಕ್‌ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ  ಶನಿವಾರ ಜಿ.ಪಂ. ಅಧ್ಯಕ್ಷರು ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು.

 ಜಿ.ಪಂ. ಅಧ್ಯಕ್ಷ ಸಿ. ಮಹಲಿಂಗಪ್ಪ, ಸದಸ್ಯೆ ಕರಿಯಮ್ಮ ಹಾಗೂ ತಾ.ಪಂ. ಅಧ್ಯಕ್ಷೆ ಅನುರಾಧಾ ರಾಜಣ್ಣ ಶನಿವಾರ ಸಮಾಜಕಲ್ಯಾಣ ಇಲಾಖೆಯ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದರು. ನಿಲಯದ ಹಾಜರಾತಿ ಪುಸ್ತಕದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 40. ಆದರೆ, ನಿಲಯದಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಎರಡು.

ನಿಲಯಪಾಲಕರಿಗೆ ಹಾಜರಾತಿ ಪುಸ್ತಕ ಕೇಳಿದರೂ ಕೊಡದ ಪರಿಸ್ಥಿತಿ. ವಿದ್ಯಾರ್ಥಿಗಳು ನಮಗೆ ಇಂದು ಊಟವಿಲ್ಲ, ಅಡುಗೆ ಮಾಡಲು ದವಸ-ಧಾನ್ಯವಿಲ್ಲ ಎಂದು ಅಧ್ಯಕ್ಷರ ಬಳಿ ದೂರಿದಾಗ, ಅಧ್ಯಕ್ಷರೇ ವಿದ್ಯಾರ್ಥಿಗಳಿಗೆ ಊಟಕ್ಕೆ ಹಣ ನೀಡಿದರು.

ಬಾಲಕರ ವಿದ್ಯಾರ್ಥಿನಿಲಯದಲ್ಲಿ ಲಕ್ಷಾಂತರ ರೂ ಮೌಲ್ಯದ ಗ್ಯಾಸ್ ಪರಿಕರ ಹಾಗೂ ಸಾಮಗ್ರಿಗಳು ಬಳಸದೇ ಮೂಲೆ ಸೇರಿದ್ದವು. ಮೂರು ತಿಂಗಳಿನಿಂದ ನಮಗೆ ಕಿಟ್ ವಿತರಿಸಿಲ್ಲ ಎಂದು ಅಲ್ಲಿದ್ದ ವಿದ್ಯಾರ್ಥಿನಿಯರು ಅಧ್ಯಕ್ಷರ ಗಮನಕ್ಕೆ ತಂದರು.

ನಿವೃತ್ತ ಪ್ರಾಂಶುಪಾಲ ಎಂ. ವೀರಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ. ಶಿವಣ್ಣ, ಸದಸ್ಯರಾದ ಶಿವಮೂರ್ತಿ, ಪಟೇಲ್, ರಾಜಣ್ಣ, ಚಂದ್ರು ಮಧು, ಬೇತೂರು ನಾಗರಾಜ್, ಚಿಕ್ಕೆಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.