ADVERTISEMENT

ಹೊಳಲ್ಕೆರೆ: ಅಧಿಕಾರಿಗಳ ಗೈರು; ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 5:20 IST
Last Updated 17 ಸೆಪ್ಟೆಂಬರ್ 2011, 5:20 IST
ಹೊಳಲ್ಕೆರೆ: ಅಧಿಕಾರಿಗಳ ಗೈರು; ಸದಸ್ಯರ ಆಕ್ರೋಶ
ಹೊಳಲ್ಕೆರೆ: ಅಧಿಕಾರಿಗಳ ಗೈರು; ಸದಸ್ಯರ ಆಕ್ರೋಶ   

ಹೊಳಲ್ಕೆರೆ: ಪಟ್ಟಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸದಸ್ಯರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು.

ಪ್ರತೀ ಸಭೆಗೂ ಕೆಲವು ಅಧಿಕಾರಿಗಳು ಒಂದಿಲ್ಲೊಂದು ನೆಪವೊಡ್ಡಿ ಗೈರು ಹಾಜರಾಗುತ್ತಿದ್ದಾರೆ. ಇದರಿಂದ ಆ ಇಲಾಖೆಗಳ ಪ್ರಗತಿಯ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಅನೇಕ ಬಾರಿಸೂಚನೆ ನೀಡಿದರೂ, ನಿರ್ಲಕ್ಷ್ಯ ಮಾಡಲಾಗುತ್ತಿದೆ. ಅಧ್ಯಕ್ಷರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕ್ರಮಕೈಗೊಳ್ಳಬೇಕು ಎಂದು ಸದಸ್ಯರಾದ ಮೋಹನ್ ನಾಗರಾಜ್, ಲವಕುಮಾರ್, ಓಂಕಾರ ಸ್ವಾಮಿ ಮತ್ತಿತರರು ಒತ್ತಾಯಿಸಿದರು.

ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ವಿಳಂಬ ಧೋರಣೆ ಅನುಸರಿಸದೆ ತ್ವರಿತಗತಿಯಲ್ಲಿ ಕೆಲಸ ಮಾಡಬೇಕು ಎಂದು ಅಧ್ಯಕ್ಷೆ ಪ್ರೇಮಾ ಧನಂಜಯ ಸೂಚಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಇದರಿಂದ ಬಡವರೂ ಕೂಡ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಕೆಲ ಸದಸ್ಯರು ಆರೋಪಿಸಿದರು.

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸರಿಯಾದ ಮಾಹಿತಿ ಒದಗಿಸುತ್ತಿಲ್ಲ. ಅನುದಾನ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವುದೇ ಅಂಕಿ-ಅಂಶ ನೀಡುತ್ತಿಲ್ಲ. ಕಳಪೆ ಕಾಮಗಾರಿನಡೆಸಿ, ಹಣ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇವರ ಬಗ್ಗೆ ಸೂಕ್ತ ಕ್ರಮಜರುಗಿಸಬೇಕು ಎಂದು ಸದಸ್ಯ ಓಂಕಾರ ಸ್ವಾಮಿ ಒತ್ತಾಯಿಸಿದರು.

ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಆವಿನಹಟ್ಟಿ, ಎನ್.ಜಿ. ಹಳ್ಳಿ ಭಾಗಗಳಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದು, ಜನ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶೀಘ್ರವೇ ನೀರಿನ ಪರೀಕ್ಷೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿ.ಪಂ. ಎಂಜಿನಿಯರ್‌ಗೆ ಸದಸ್ಯ ಮೋಹನ್ ನಾಗರಾಜ್ ಸೂಚಿಸಿದರು.

ಸಮಾಜಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಶುಚಿತ್ವ ಕಾಪಾಡುತ್ತಿಲ್ಲ ಎಂಬ ದೂರುಗಳು ಬಂದಿದ್ದು, ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಸಿ. ಲವ, ಜಗದೀಶ್ ಸೂಚಿಸಿದರು.

`ಶಾಲೆಗಳಿಗೆ ಬಿಸಿಯೂಟದ ಪಡಿತರ ಸರಿಯಾಗಿ ವಿತರಣೆ ನಡೆಯುತ್ತಿಲ್ಲ. ಸಭೆಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ~ ಎಂದು ಕೆಲ ಸದಸ್ಯರು ದನಿ ಎತ್ತಿದಾಗ, ಅಧಿಕಾರಿ ಜಯಣ್ಣ ಮತ್ತು ಸದಸ್ಯರ ನಡುವೆ ವಾಗ್ವಾದ ನಡೆಯಿತು.

ತಾಲ್ಲೂಕಿನಲ್ಲಿ ಮಳೆ ಇಲ್ಲದೇ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಹಾನಿ ಉಂಟಾಗಿದೆ. ಮೆಕ್ಕೆಜೋಳ, ಹತ್ತಿ, ಈರುಳ್ಳಿ, ರಾಗಿ ಬೆಳೆಗಳು ಒಣಗಿದ್ದು, ರೈತರಿಗೆ ಬೀಜ, ಗೊಬ್ಬರದ ಹಣವೂ ಸಿಗುವುದಿಲ್ಲ. ಆದ್ದರಿಂದ, ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ಸೂಕ್ತ ಬೆಳೆಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.

ಉಪಾಧ್ಯಕ್ಷೆ ಪುಟ್ಟೀಬಾಯಿ, ಸಾಮಾಜಿಕ ಸ್ಥಾಯಿಸಮಿತಿ ಅಧ್ಯಕ್ಷ ರವಿ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಇದ್ದರು.

ಸಾಂಕ್ರಾಮಿಕ ರೋಗವಲ್ಲ
ಧರ್ಮಪುರ: ಏಡ್ಸ್ ಸಾಂಕ್ರಾಮಿಕ ರೋಗವಲ್ಲ. ಎಚ್‌ಐವಿಪೀಡಿತರನ್ನು ಸಮಾಜದಲ್ಲಿ ಮಾನವೀಯತೆಯಿಂದ ನೋಡಿಕೊಳ್ಳಿ ಎಂದು ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆನಂದ್ ತಿಳಿಸಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರ ಮತ್ತು ಧರ್ಮಪುರದ ಗ್ರಾಮ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ `ಏಡ್ಸ್ ಜಾಗೃತಿ ಸ್ವಯಂ ಸೇವಕರ ತರಬೇತಿ~ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಲೈಂಗಿಕ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರು ಎಚ್ಚರವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿಎಚ್‌ಐವಿ ಸೋಂಕಿತರ ಸಂಖ್ಯೆ ಅಧಿಕವಾಗಲಿದೆ. ಮಾದಕ ವ್ಯಸನಿಗಳು ಒಟ್ಟಾಗಿ ಒಂದೇ ಸಿರಿಂಜ್ ಬಳಸುವುದು ಹಾಗೂ ಲೈಂಗಿಕ ಅಸುರಕ್ಷತೆಯಿಂದ ಏಡ್ಸ್‌ರೋಗ ಬರುತ್ತದೆ. ಇದರ ಬಗ್ಗೆ ಸ್ವಯಂ ಸೇವಕರು ಗ್ರಾಮೀಣ ಪ್ರದೇಶದ ನಾಗರಿಕರಿಗೆ ತಿಳಿವಳಿಕೆ ನೀಡಬೇಕು ಎಂದರು

ಜಿಲ್ಲಾ ಏಡ್ಸ್ ಜಾಗೃತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ವಿಜಯ್‌ಕುಮಾರ್, ಬೆನಕಪ್ಪ, ಆಪ್ತ ಸಮಲೋಚಕ ಶಿವಲಿಂಗಪ್ಪ ಮಾತನಾಡಿದರು.

ವೇದಿಕೆಯಲ್ಲಿ ಮಂಗಳಗೌರಮ್ಮ, ರಂಗನಾಥ್, ಲಕ್ಷ್ಮೀದೇವಿ ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.