ADVERTISEMENT

‘ಕೆಸರು ಗದ್ದೆಯಾದ ವೇತನದ ಹುದ್ದೆಗಳು’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 8:16 IST
Last Updated 24 ಸೆಪ್ಟೆಂಬರ್ 2013, 8:16 IST

ಚಿತ್ರದುರ್ಗ: ‘ಮನುಷ್ಯ ಇಂದು ತಾನು ಮಾಡುವಂತ ವೃತ್ತಿಯನ್ನು ಸಮಾಜದ ಒಳಿತಿಗಾಗಿ ಎಂದುಕೊಳ್ಳದೇ ಕೇವಲ ವೇತನಕ್ಕಾಗಿ ಎನ್ನುವಂತ ಮನಸ್ಥಿತಿಗೆ ತಲುಪಿರುವ ಕಾರಣ ಹುದ್ದೆಯನ್ನು ಕೆಸರು ಗದ್ದೆಯಾಗಿ ಪರಿವರ್ತಿಸಿದ್ದಾನೆ’ ಎಂದು ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜಿ.ಎನ್‌.ಮಲ್ಲಿಕಾರ್ಜುನಪ್ಪ ಅವರು ವಿಷಾಧಿಸಿದರು.

ನಗರದ ಐಶ್ವರ್ಯಫೋರ್ಟ್‌ ಸಭಾಂಗಣದಲ್ಲಿ ಭಾನುವಾರ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ವತಿಯಿಂದ ರಾಜ್ಯ ಮಂಡಳಿಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಚಳ್ಳಕೆರೆ ಯರ್ರಿಸ್ವಾಮಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರ ಮೇಲೂ ತಮ್ಮ ವೃತ್ತಿಪರತೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವಂತಹ ಜವಾಬ್ದಾರಿ ಇದೆ. ಆದರೆ, ಅದನ್ನು ಮರೆತು ಅನೇಕರು ಸಾಮಾಜಿಕ ಹೊಣೆಗಾರಿಕೆಯಿಂದ ವಿಮುಖರಾಗುತ್ತಿರುವುದು ಪ್ರಸ್ತುತ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿದ ನಂತರ ಯರ್ರಿಸ್ವಾಮಿ ಮಾತನಾಡಿ, ಸಾಮಾಜಿಕ ಸೇವೆಯನ್ನು ಮನಸ್ಸಿನ ಸಂತೋಷಕ್ಕಾಗಿ ಮಾಡಬೇಕು. ವೇತನಕ್ಕಾಗಿ ಮಾಡಿದರೆ ಅದು ಸಮಾಜ ಸೇವೆ ಎನ್ನಿಸಿಕೊಳ್ಳುವುದಿಲ್ಲ ಎಂದರು.

ವೈಚಾರಿಕ ವಿಜ್ಞಾನ ಶಿಬಿರ: ರಾಷ್ಟ್ರನಾಯಕ ನಿಜಲಿಂಗಪ್ಪ ಟ್ರಸ್ಟ್‌ನ ಸಹಕಾರದೊಂದಿಗೆ ರಾಜ್ಯಮಟ್ಟದಲ್ಲಿ ವೈಚಾರಿಕ ವಿಜ್ಞಾನ ಶಿಬಿರ ಮಾಡುವ ಮೂಲಕ ನಾಗರಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಅರಿವನ್ನು ಮೂಡಿಸುವ ಉದ್ದೇಶವಿದೆ. ಈ ವಿಚಾರವಾಗಿ ಟ್ರಸ್ಟ್‌ನೊಂದಿಗೆ ಕೂಡ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿ ಎನ್‌.ಎಂ.ರಮೇಶ್‌, ನಿಜಲಿಂಗಪ್ಪ ಟ್ರಸ್ಟ್‌ನ ಕಾರ್ಯದರ್ಶಿ ಮಂಜುನಾಥ್‌, ಗೋಪಾಲಪ್ಪ ಹಾಜರಿದ್ದರು.

ಲತೀಫ್ ಸಾಬ್‌ ಪ್ರಾರ್ಥಿಸಿದರು. ಎಚ್‌ಎಸ್‌ಟಿ ಸ್ವಾಮಿ ಸ್ವಾಗತಿಸಿದರು. ಹುರುಳಿ ಬಸವರಾಜ್‌ ಕಾರ್ಯಕ್ರಮ ನಿರೂಪಿಸಿದರು. ಕೇದಾರನಾಥ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.