ADVERTISEMENT

‘ಭರಮಣ್ಣನಾಯಕರ ಕೊಡುಗೆ ಅಪಾರ’

ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕನ 326ನೇ ಪಟ್ಟಾಭಿಷೇಕ ಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2015, 7:37 IST
Last Updated 29 ಸೆಪ್ಟೆಂಬರ್ 2015, 7:37 IST

ಚಿತ್ರದುರ್ಗ: ಐತಿಹಾಸಿಕ ಕೋಟೆಯನ್ನು ಆಳಿದ ಪಾಳೆಗಾರರಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕರಿಗೆ ಸಮಗ್ರ ಮತ್ತು ದೂರದೃಷ್ಟಿ ಇದ್ದುದರಿಂದ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಿದ್ದಾರೆ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಪಾಳೆಗಾರರ ಕುಲದೇವತೆ ರಾಜ ಉತ್ಸವಾಂಬ ಉಚ್ಚಂಗಿ ಎಲ್ಲಮ್ಮನ ದೇವಸ್ಥಾನದಲ್ಲಿ ಭಾನುವಾರ ನಡೆದ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕರ 326ನೇ ಪಟ್ಟಾಭಿಷೇಕ ಸ್ಮರಣೋತ್ಸವದ ನೇತೃತ್ವ ವಹಿಸಿ ಮಾತನಾಡಿದರು. 

ವಿಶ್ವಪರ್ಯಟನೆಗೆ ಹೊರಟಿದ್ದ ಮುರುಘಾ ಶಾಂತವೀರ ಸ್ವಾಮೀಜಿ ಅವರನ್ನು ತಡೆದು ಚಿತ್ರದುರ್ಗದಲ್ಲಿ ಉಳಿಯುವಂತೆ ಮಾಡಿದ ಮಹಾ ಪರಾಕ್ರಮಿ ಬಿಚ್ಚುಗತ್ತಿ ಭರಮಣ್ಣನಾಯಕ ಚಿತ್ರದುರ್ಗಕ್ಕೆ ಕೊಡುಗೆಯಾಗಿ ನೀಡಿರುವುದು ನಮ್ಮೆಲ್ಲರ ಭಾಗ್ಯ. ಅವರ ಆಳ್ವಿಕೆಯಲ್ಲಿ ಸೃಷ್ಟಿಯಾದ ಕೋಟೆ ಕೊತ್ತಲ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಅಂತಹ ಇತಿಹಾಸ ಇರುವುದ ರಿಂದಲೇ ಚಿತ್ರದುರ್ಗ ಜಿಲ್ಲೆಗೆ ಐತಿಹಾಸಿಕ ಸ್ಥಾನಮಾನ ಲಭ್ಯವಾಗಿದೆ ಎಂದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಹಿಂದಿನ ಕಾಲದ ರಾಜರು, ಅರಸರು ಜನರಿಗೆ ಉಪಯೋಗ ವಾಗುವಂತಹ ಶಾಶ್ವತ ಕೆಲಸ ಮಾಡುತ್ತಿದ್ದರು. ಒಂದು ಕೆರೆ ಕೋಡಿ ಬಿದ್ದರೆ, ನೀರು ವ್ಯರ್ಥವಾಗದಂತೆ ಇನ್ನೊಂದು ಕೆರೆಗೆ ಸೇರಿಸುವ ತಾಂತ್ರಿಕ ಕುಶಲತೆ ಅವರಲ್ಲಿತ್ತು.

ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿ ದಿದ್ದರೂ ಅಂತಹ ಜನೋಪಯೋಗಿ ಕೆಲಸ ಮಾಡಲು ಆಗುತ್ತಿಲ್ಲ. ಸಾವಿರಾರು ವರ್ಷ ಪ್ರಜೆಗಳಿಗೆ ಅನುಕೂಲವಾ ಗುವಂತೆ ಕೆರೆ ಕಾಲುವೆಗಳನ್ನು ಕಟ್ಟಿಸಿದ್ದಾರೆ. ಆದರೆ, ಈವರೆಗೂ ಸರ್ಕಾರದಿಂದ ಒಂದು ಕೆರೆ ನಿರ್ಮಿಸಲು ಸಾಧ್ಯವಾಗಿಲ್ಲ. ಕೊನೆ ಪಕ್ಷ ಅವುಗಳನ್ನು ಸಂರಕ್ಷಿಸುವಲ್ಲಿ ಆದರೂ ಕ್ರಮ ಕೈಗೊಳ್ಳಲಿ ಎಂದರು.

ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ್ ತೆಲಗಾವಿ ಮಾತನಾಡಿ, ಮುರುಘಾ ಶಾಂತವೀರ ಸ್ವಾಮೀಜಿ ಭರಮಣ್ಣ ನಾಯಕನಿಗೆ ಬಿಚ್ಚುಗತ್ತಿ ಎಂಬ ಬಿರುದು ಕೊಟ್ಟು ದುರ್ಗದ ಇತಿಹಾಸದಲ್ಲಿ ಭರಮಣ್ಣ ನಾಯಕನನ್ನು ಜನಪ್ರಿಯ ಗೊಳಿಸಿದರು. ಅಂತಹ ನಾಯಕನ ಪಟ್ಟಾಭಿಷೇಕ ಸ್ಮರಣೋತ್ಸವ ಬರದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾ ಗುತ್ತಿದೆ ಎಂದು ಹೇಳಿದರು.

ಮುರುಘಾಮಠ ಸ್ಥಾಪನೆಗೆ ಭರಮಣ್ಣ ನಾಯಕರೇ ಕಾರಣ ಎಂಬುದನ್ನು ಮರೆಯಬಾರದು. ಕೋಟೆಯ ಮೇಲ್ಭಾಗದಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕ ಸಮಾಧಿ ಹಾಳಾಗಿದೆ. ಅದನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಈ ಸಂದರ್ಭದಲ್ಲಿ ಶಿವಮೂರ್ತಿ ಶರಣರಲ್ಲಿ ಮನವಿ ಮಾಡಿದರು.

ಡಾ.ರಾಮಚಂದ್ರ ನಾಯಕ ಭರಮಣ್ಣನಾಯಕ ವೇಷ ಧರಿಸಿದ್ದರು. ನಿವೃತ್ತ ಕಾರ್ಮಿಕ ಆಯುಕ್ತ ಜಿಂಕಲಪ್ಪ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಬಿ.ಎಲ್.ವೇಣು, ಮಲ್ಲಿಕಾರ್ಜುನ್, ಗೋಪಾಲಸ್ವಾಮಿ ನಾಯಕ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.