ADVERTISEMENT

‘ಮಧ್ಯಾಹ್ನದ ಮಾರಿ’ಗೆ ಭಕ್ತಿ ಸಮರ್ಪಣೆ

ಚಳ್ಳಕೆರೆ: ಜಾತ್ರೆಯಲ್ಲಿ ಜನರ ಹರಕೆ, ಆಚರಣೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 5:05 IST
Last Updated 11 ಸೆಪ್ಟೆಂಬರ್ 2013, 5:05 IST
ಗೌರಸಮುದ್ರ ಮಾರಮ್ಮನ ದೇಗುಲದ ಮುಂಭಾಗದಲ್ಲಿ ಭಕ್ತರು ನೆರೆದಿರುವ ದೃಶ್ಯ.
ಗೌರಸಮುದ್ರ ಮಾರಮ್ಮನ ದೇಗುಲದ ಮುಂಭಾಗದಲ್ಲಿ ಭಕ್ತರು ನೆರೆದಿರುವ ದೃಶ್ಯ.   

ಚಳ್ಳಕೆರೆ: ತಾಲ್ಲೂಕಿನ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಬಡುಕಟ್ಟು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಗೌರಸಮುದ್ರ ಮಾರಮ್ಮನ ಜಾತ್ರೆ ಮಂಗಳವಾರ ಸಂಭ್ರಮ ಸಡಗರದ ಮೂಲಕ ವಿವಿಧ ಆಚರಣೆಗಳು ಜರುಗಿದವು.

ತಲತಲಾಂತರದಿಂದಲೂ ಜನರು ನಂಬಿರುವ ಅನೇಕ ನಂಬಿಕೆಗಳು ವಿಶಿಷ್ಟ ಆಚರಣೆಗಳು ಈ ಜಾತ್ರೆಯಲ್ಲಿ ಇಂದಿಗೂ ನಡೆಯುತ್ತಿರುವುದು ಕಂಡುಬಂದಿತು. ಹುಟ್ಟಿದ ಹಸುಗೂಸಿಗೆ ಕಾಯಿಲೆ ಬಂದರೆ, ತಾಯಿಗೆ ಎದೆಹಾಲು ಕಡಿಮೆ ಆದರೆ, ಸಿಡುಬು ಮುಂತಾದ ರೋಗಗಳು ಮಕ್ಕಳಿಗೆ ಕಾಣಿಸಿಕೊಂಡರೆ ಅನಾದಿ ಕಾಲದಿಂದಲೂ ಹರಕೆ ಹೊರುವ ಭಕ್ತರು ಇಲ್ಲಿ ತಮ್ಮ ಹರಕೆ ತೀರಿಸುತ್ತಾರೆ.

ಕೋಳಿ ಮರಿಗಳನ್ನು ದೇವಿ ತುಮುಲು ಪ್ರದೇಶಕ್ಕೆ ಬರುವ ಸಂದರ್ಭದಲ್ಲಿ ತೂರುವ ಭಕ್ತರು, ಈರುಳ್ಳಿ ಬೆಳೆ ಹುಲುಸಾಗಿ ಬರಲಿ ಎಂದು ಈರುಳ್ಳಿಯನ್ನು ಕಿತ್ತು ತಂದು ತೂರುವುದುಂಟು. ಇಂತಹ ಅನೇಕ ಆಚರಣೆಗಳನ್ನು ಇಂದಿಗೂ ಮುಂದುವರಿಸುತ್ತಾ ಬಂದಿರುವ ಜನರಿಗೆ ಮಾರಮ್ಮನ ಹಬ್ಬ ಎಂದರೆ ಎಲ್ಲಿಲ್ಲದ ಸಡಗರ.

ಒಂದು ದಿನ ಮುಂಚಿತವಾಗಿಯೇ ಭಕ್ತರು ನಾನಾ ಕಡೆಗಳಿಂದ ಎತ್ತಿನ ಬಂಡಿಗಳಲ್ಲಿ ಮತ್ತು ಟೆಂಪೋಗಳಲ್ಲಿ ಬಂದು ದೇವಿಯ ದರ್ಶನ ಪಡೆದು ಹರಕೆ ತೀರಿಸುವುದುಂಟು. ಇಲ್ಲಿ ಬಹು ಹಿಂದಿನಿಂದಲೂ ಹರಕೆ ಹೊತ್ತ ಭಕ್ತರು ಬೇವಿನ ಉಡುಗೆ ಉಟ್ಟು ದೇವಿಯ ಕೃಪೆಗೆ ಪಾತ್ರರಾಗುವುದನ್ನು ಕಾಣಬಹುದಿತ್ತು. ಆದರೆ, ಇದೀಗ ಜಿಲ್ಲಾಡಳಿತ ಬೆತ್ತಲೆ ಬೇವಿನ ಉಡುಗೆಯನ್ನು ನಿಷೇಧಿಸಿರುವುದರಿಂದ ಮೈಮೇಲೆ ಬಟ್ಟೆ ತೊಟ್ಟ ಕೆಲ ಭಕ್ತರು ಹರಕೆ ತೀರಿಸುತ್ತಿರುವುದು ಮಂಗಳವಾರ ತುಮಲು ಪ್ರದೇಶದಲ್ಲಿ ಕಂಡುಬಂದಿತು.

ಹೊಸದಾಗಿ ವಿವಾಹವಾದ ದಂಪತಿ ಗೌರಸಮುದ್ರ ಮಾರಮ್ಮನ ಜಾತ್ರೆಗೆ ಹೋಗಿ ಬರಬೇಕು ಎಂಬ ಪ್ರತೀತಿ ಈ ಭಾಗದಲ್ಲಿ ಇರುವುದರಿಂದ ಹೊಸ ಜೋಡಿಗಳು ಜಾತ್ರೆಯಲ್ಲಿ ಅಲ್ಲಲ್ಲಿ ಕಂಡುಬಂದರು.

ಕ್ಷೀಣಿಸಿದ ಎತ್ತಿನ ಬಂಡಿಗಳು: ಪಾರಂಪರಿಕವಾಗಿ ಎತ್ತಿನ ಬಂಡಿಯಲ್ಲಿ ಜನರು ಇಲ್ಲಿನ ದೇವಿಗೆ ಬಂದು ಹರಕೆ, ಆಚರಣೆಗಳನ್ನು ಒಪ್ಪಿಸುವುದುಂಟು. ಆದರೆ, ಈ ಬಾರಿ ಎತ್ತಿನ ಬಂಡಿಗಳ ಸಂಖ್ಯೆ ಇಳಿಮುಖವಾಗಿತ್ತು. ಬದಲಾಗಿ ಟೆಂಪೋ, ಟ್ರ್ಯಾಕ್ಟರ್‌ಗಳು,
ದ್ವಿಚಕ್ರ ವಾಹನಗಳಲ್ಲಿ ಜನರು ಸಾಲುಗಟ್ಟಿ ಜಾತ್ರೆಗೆ ಧಾವಿಸುತ್ತಿರುವುದು ಸಾಮಾನ್ಯ ವಾಗಿತ್ತು.  

ಪ್ರಾಣಿ ಬಲಿ ನಿಷೇಧ
ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಿಸಿದೆ ಎಂಬ ಬರಹ ಉಳ್ಳ ಬ್ಯಾನರ್‌ಗಳನ್ನು ಅಲ್ಲಲ್ಲಿ ಕಟ್ಟಲಾಗಿತ್ತು. ಇಂದಿನಿಂದ ಒಂದು ತಿಂಗಳ ಕಾಲ ಪ್ರತೀ ಮಂಗಳವಾರ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕಿನ ಪ್ರತೀ ಹಳ್ಳಿಗಳಲ್ಲಿ  ಮಾರಮ್ಮನ ಹಬ್ಬ ಮಾಡುವುದುಂಟು. ಶ್ರಾವಣ ಮಾಸ ಮುಗಿದು ಇದೀಗ ಮಾರಮ್ಮ ಹಬ್ಬಗಳಲ್ಲಿ ಒಂದು ತಿಂಗಳ ಕಾಲ ಮಾಂಸದೂಟ ನಡೆಯುವುದು ಈ ಭಾಗದಲ್ಲಿ ಅತ್ಯಂತ ಪ್ರಸಿದ್ದಿ ಪಡೆದ ಹಬ್ಬ ಆಗಿದೆ.

ವರುಣನ ಕೃಪೆ..ಎಲ್ಲೆಲ್ಲೂ ಜನವೋ ಜನ: ಈಬಾರಿಯ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿರುವ ಶೇಂಗಾ ಫಸಲಿಗೆ ಮಳೆರಾಯ ಕಳೆದ ವಾರ ಒಂದಿಷ್ಟು ಕೃಪೆ ತೋರಿದ ಪರಿಣಾಮ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

ಭರ್ಜರಿ  ವ್ಯಾಪಾರ: ಜಾತ್ರೆ ಎಂದರೆ ಮಂಡಕ್ಕಿ, ಬೆಂಡು, ಬತ್ತಾಸು, ಕಾರ ಸೇರಿದಂತೆ ವಿವಿಧ ರೀತಿಯ ಸಿಹಿ ತಿನಿಸುಗಳು ಇದ್ದೇ ಇರುತ್ತವೆ. ಇಲ್ಲಿಯೂ ಸಹ ಮಂಡಕ್ಕಿ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರ ನಡೆಯುತ್ತಿರುವ ದೃಶ್ಯ ಕಂಡು ಬಂತು.

‘ಈ ಜಾತ್ರೆಗೆ ಹೋದವರು ದೇವಿಗೆ ಹಣ್ಣು–ಕಾಯಿ ಮಾಡಿಸಿ ಮನೆಗೆ ಹಿಂದಿರುಗಿ ಹೋಗುವಾಗ ಕಾರ ಮಂಡಕ್ಕಿ ಕೊಂಡು ಹೋಗಬೇಕು ಎಂಬ ಪ್ರತೀತಿ ಇರುವುದರಿಂದ ಕಡ್ಡಾಯವಾಗಿ ಎಲ್ಲರೂ ಕಾರ ಮಂಡಕ್ಕಿ ಕೊಳ್ಳುವುದು ನಡೆಯುತ್ತಾ ಬಂದಿದೆ. ಆದ್ದರಿಂದಲೇ ಕಾರ ಮಂಡಕ್ಕಿ ಕೊಳ್ಳುತ್ತೇನೆ’ ಎನ್ನುತ್ತಾರೆ ಭಕ್ತ ಕಾಟಜ್ಜ.

ಕುಡಿವ ನೀರಿನ ವ್ಯವಸ್ಥೆ: ಜಾತ್ರೆಯಲ್ಲಿ ಕುಡಿಯುವ ನೀರಿಗಾಗಿ ತಾಲ್ಲೂಕು ಆಡಳಿತ ಭಕ್ತರಿಗೆ ಟ್ಯಾಂಕರ್‌ಗಳಲ್ಲಿ ನೀರಿನ ವ್ಯವಸ್ಥೆ ಮಾಡಿದ್ದರು. ಉಳಿದಂತೆ ಮೋಡಮುಸುಕಿದ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ಭಕ್ತರ ಮೊಗದಲ್ಲಿ ಜಾತ್ರೆಯ ಸಡಗರ ಹೆಚ್ಚುವಂತೆ ಮಾಡಿತ್ತು.

ಧರ್ಮ ಭಿಕ್ಷೆ ಬೇಡುವ ಸಿಂಧೊಳ್ಳರು: ಅಲೆಮಾರಿ ಸಮುದಾಯಕ್ಕೆ ಸೇರಿದ ಸಿಂಧೊಳ್ಳು ಸಮುದಾಯದ ಕುಟುಂಬವೊಂದು ಪ್ರತೀ ವರ್ಷದ ಜಾತ್ರೆಯಲ್ಲಿ ಭಿಕ್ಷಾಟನೆ ಮಾಡುವುದು ಎಲ್ಲರ ಗಮನ ಸೆಳೆಯುತ್ತದೆ.

ನೆರೆದವರನ್ನು ಕ್ಷಣಮಾತ್ರದಲ್ಲೇ ತನ್ನೆಡೆಗೆ ಸೆಳೆಯುವಂತೆ ಕೈಗಳಿಗೆ ಕತ್ತಿಯಿಂದ ಕೊಯು್ದಕೊಂಡು ರಕ್ತ ಬರುವಂತೆ ಮಾಡಿ ನೋಡುಗರನ್ನು ಸೆಳೆಯುತ್ತಾರೆ.  ಇಂತಹ ಕುಟುಂಬವೊಂದು ಈ ಬಾರಿಯೂ ಗಮನ ಸೆಳೆಯಿತು.  

ಶಾಸಕರ ಭೇಟಿ: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹಾಗೂ ಮೊಳಕಾಲ್ಮುರು ಕ್ಷೇತ್ರದ ಶಾಸಕ ಎಸ್‌.ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಪಾಲ್ಗೊಂಡು ತುಮಲು ಪ್ರದೇಶದಲ್ಲಿ ದೇವಿಯ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.