ADVERTISEMENT

ಲೋಕ ಅದಾಲತ್; 3,671 ಪ್ರಕರಣ ಇತ್ಯರ್ಥ

ನ್ಯಾಯಾಂಗ ಇಲಾಖೆಯಲ್ಲಿ ಮೂಡಿದ ಸಂತಸ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 15:59 IST
Last Updated 19 ಸೆಪ್ಟೆಂಬರ್ 2020, 15:59 IST
ಚಿತ್ರದುರ್ಗದಲ್ಲಿ ಶನಿವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೊಳಿ ಪ್ರೇಮಾವತಿ ಅವರ ನೇತೃತ್ವದಲ್ಲಿ ಅದಾಲತ್ ನಡೆಯಿತು
ಚಿತ್ರದುರ್ಗದಲ್ಲಿ ಶನಿವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೊಳಿ ಪ್ರೇಮಾವತಿ ಅವರ ನೇತೃತ್ವದಲ್ಲಿ ಅದಾಲತ್ ನಡೆಯಿತು   

ಚಿತ್ರದುರ್ಗ: ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ನ್ಯಾಯಾಲಯಗಳಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಮ್ಮಿಕೊಂಡಿದ್ದ ‘ಮೆಗಾ ಇ –ಲೋಕ ಅದಾಲತ್‌’ನಲ್ಲಿ ಒಟ್ಟು 3,671 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.

ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಂದೇ ದಿನ ಇಷ್ಟೊಂದು ಪ್ರಕರಣಗಳು ರಾಜಿಯಲ್ಲಿ ಇತ್ಯರ್ಥವಾಗಿದ್ದು, ಅದಾಲತ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವುದು ನ್ಯಾಯಾಂಗ ಇಲಾಖೆಯಲ್ಲಿ ಸಂತಸ ಮೂಡಿಸಿದೆ.

ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೊಳಿ ಪ್ರೇಮಾವತಿ ಅವರ ನೇತೃತ್ವದಲ್ಲಿ ಅದಾಲತ್ ನಡೆಯಿತು. ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ 31,564 ಪ್ರಕರಣಗಳ ಪೈಕಿ 6,173 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 3,671 ಪ್ರಕರಣ ರಾಜಿ ಮೂಲಕ ಇತ್ಯರ್ಥಗೊಳಿಸಿ, ₹ 5.79 ಕೋಟಿ ಹಣವನ್ನು ಸಂಬಂಧಿಸಿದವರಿಗೆ ಕೊಡಿಸಲಾಯಿತು.

ADVERTISEMENT

21 ವ್ಯಾಜ್ಯ ಪೂರ್ವ ಪ್ರಕರಣ ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 1 ಪ್ರಕರಣಗಳೊಂದಿಗೆ ₹ 5.3 ಲಕ್ಷ ಹಣವನ್ನು ಇತ್ಯರ್ಥಗೊಳಿಸಲಾಯಿತು. ಅದಾಲತ್‌ನಲ್ಲಿ ಚೆಕ್‌ ಬೌನ್ಸ್‌, ಬ್ಯಾಂಕ್ ವಸೂಲಾತಿ, ಕಾರ್ಮಿಕರ ವಿವಾದ, ವಿದ್ಯುತ್ ಮತ್ತು ನೀರಿನ ಶುಲ್ಕ ಪ್ರಕರಣ ಸೇರಿ ಇತರೆ ವ್ಯಾಜ್ಯ ಪೂರ್ವ ಪ್ರಕರಣಗಳು ಅದಾಲತ್‌ಗೆ ಆಯ್ಕೆಯಾಗಿದ್ದವು.

ಮೋಟಾರು ವಾಹನ ಅಪಘಾತ ಪರಿಹಾರ, ಭೂಸ್ವಾಧೀನ ಪ್ರಕರಣ, ಕಂದಾಯ ಪ್ರಕರಣ, ಕೌಟುಂಬಿಕ ಕಲಹ, ಬಾಡಿಗೆ ಅನುಭೋಗದ ಹಕ್ಕು ಸೇರಿ ಹಲವು ಪ್ರಕರಣ ರಾಜಿ ಮೂಲಕ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಅನೇಕ ಪ್ರಕರಣ ಇತ್ಯರ್ಥಗೊಂಡವು.

ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ ಸಂಪರ್ಕದೊಂದಿಗೆ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿದರು. ನ್ಯಾಯಾಧೀಶರಾದ ಆರ್.ಬನ್ನಿಕಟ್ಟಿ ಹನುಮಂತಪ್ಪ, ಟಿ.ಶಿವಣ್ಣ, ಬಿ.ಕೆ.ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.