ADVERTISEMENT

ಸಿಇಟಿ, ಕಾಮೆಡ್‌-ಕೆ ಪರೀಕ್ಷೆ ಮುಂದೂಡಿ: ಎನ್‌ಎಸ್‌ಯುಐನ ಮಮತಾ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 8:26 IST
Last Updated 18 ಜುಲೈ 2020, 8:26 IST
ಮಮತಾ ನೇರ್ಲಿಗೆ
ಮಮತಾ ನೇರ್ಲಿಗೆ   

ಚಿತ್ರದುರ್ಗ: ‘ರಾಜ್ಯ ಸರ್ಕಾರ ಜುಲೈ 30, 31 ಹಾಗೂ ಆಗಸ್ಟ್ 1ರಂದು ನಡೆಸಲು ಉದ್ದೇಶಿಸಿರುವ ಸಿಇಟಿ ಮತ್ತು ಕಾಮೆಡ್‌-ಕೆ ಪರೀಕ್ಷೆಯನ್ನು ಮುಂದೂಡಬೇಕು’ ಎಂದು ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಮಮತಾ ನೇರ್ಲಿಗೆ ಮುಖ್ಯಮಂತ್ರಿ, ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.

‘ರಾಜ್ಯದಾದ್ಯಂತ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಈ ಹಿಂದೆಯೂ ಸಮರ್ಪಕ ಸಿದ್ಧತೆ ಇಲ್ಲದೆ ಭಯದಲ್ಲಿಯೇ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ದ್ವಿತೀಯ ಪಿಯು ಫಲಿತಂಶ ಈಗಷ್ಟೇ ಬಂದಿದೆ. ಈಗ ಪುನಾ ಅದಕ್ಕಿಂತ ಹೆಚ್ಚಿನ ಆತಂಕದಲ್ಲಿ ಸಿಇಟಿ/ಕಾಮೆಡ್-ಕೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಲಾಕ್‌ಡೌನ್ ಹಿನ್ನಲೆಯಲ್ಲಿ ಸಮರ್ಪಕವಾಗಿ ತರಬೇತಿ ಪಡೆಯಲು ಸಾಧ್ಯವಾಗಿಲ್ಲ. ಜತೆಗೆ ದಿನೇ ದಿನೇ ಕೊರೊನಾ ಮಹಾಮಾರಿ ಹೆಚ್ಚುತ್ತಿದ್ದು, ರಾಜ್ಯದಲ್ಲಿ 20 ಸಾವಿರ ಗಡಿ ದಾಟಿದೆ. ಪುನಾ ಈ ಪರೀಕ್ಷೆಗಳು ನಡೆದರೆ ಲಕ್ಷಾಂತರ ವಿದ್ಯಾರ್ಥಿಗಳು ಸೇರಿ ಸೋಂಕು ಉಲ್ಬಣಿಸುವ ಸಾಧ್ಯತೆ ಹೆಚ್ಚಿದೆ. ಇದನ್ನು ತಡೆಯಬೇಕಾದರೆ ಪರೀಕ್ಷೆ ಮುಂದೂಡುವುದು ಅನಿವಾರ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಕೇಂದ್ರ ಸರ್ಕಾರದಿಂದ ನಡೆಯುವ ಜೆಇಇ, ನೀಟ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅದೇ ರೀತಿ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿಯೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಹಠಕ್ಕೆ ಬಿದ್ದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ತೀರ್ಮಾನಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.

‘ಕೋವಿಡ್-19 ನಿಯಂತ್ರಿಸಲು ಸರ್ಕಾರ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿ ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ಪುನಾ ಅನುಷ್ಠಾನಗೊಳಿಸಿದೆ. ಮತ್ತೊಂದೆಡೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡಲು ಮುಂದಾಗಿದೆ’ ಎಂದು ದೂರಿರುವ ಅವರು, ‘ಪ್ರಸ್ತುತ ಪರಿಸ್ಥಿತಿಯ ಗಂಭೀರತೆ ಮನಗಂಡು ಪರೀಕ್ಷೆ ಮುಂದುಡಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.