ಬೆಳ್ಳುಳ್ಳಿ
(ಸಾಂದರ್ಭಿಕ ಚಿತ್ರ)
ಚಿತ್ರದುರ್ಗ: ತಾಲ್ಲೂಕಿನ ದಂಡಿನಕುರುಬರಹಟ್ಟಿಯ ಗೋದಾಮಿನಲ್ಲಿ ಉದ್ಯಮಿಯೊಬ್ಬರು ಸಂಗ್ರಹಿಸಿಟ್ಟಿದ್ದ ₹ 6 ಲಕ್ಷ ಮೌಲ್ಯದ 150 ಚೀಲ ಬೆಳ್ಳುಳ್ಳಿ ಕಳವಾಗಿದೆ.
ರಾಜಲಕ್ಷ್ಮಿ ಕಂಪನಿಯ ಜಿ.ಎಂ.ಬಸವಕಿರಣ್ ಎಂಬುವರಿಗೆ ಸೇರಿದ ಬೆಳ್ಳುಳ್ಳಿ ಕಳುವಾಗಿವೆ. ಗೋದಾಮಿನ ಷಟರ್ ಮುರಿದು ಕೃತ್ಯ ಎಸಗಲಾಗಿದೆ. ಬೆಳ್ಳುಳ್ಳಿ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕಳವು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ಬಸವಕಿರಣ್ ಅವರು 50 ಕೆ.ಜಿ. ತೂಕದ 1,100 ಚೀಲ ಬೆಳ್ಳುಳ್ಳಿಯನ್ನು ಮಧ್ಯಪ್ರದೇಶದಲ್ಲಿ ಖರೀದಿಸಿ ಚಿತ್ರದುರ್ಗಕ್ಕೆ ತಂದಿದ್ದರು. ದಂಡಿನಕುರುಬರಹಟ್ಟಿಯ ಜಯಶೀಲರೆಡ್ಡಿ ಎಂಬುವರ ಗೋದಾಮಿನಲ್ಲಿ ಐದು ತಿಂಗಳಿಂದ ಸಂಗ್ರಹಿಸಿಟ್ಟಿದ್ದರು. ಗೋದಾಮಿಗೆ ಭೇಟಿ ನೀಡಿದಾಗ ಷಟರ್ ಮುರಿದಿದ್ದು ಗೊತ್ತಾಗಿದೆ. ಚೀಲಗಳನ್ನು ಪರಿಶೀಲಿಸಿ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.