ADVERTISEMENT

20 ಸಾವಿರ ಸ್ವಸಹಾಯ ಸಂಘ ರಚಿಸುವ ಗುರಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 8:20 IST
Last Updated 14 ಜೂನ್ 2012, 8:20 IST

ಹೊಳಲ್ಕೆರೆ: ಒಂದು ವರ್ಷದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ 20 ಸಾವಿರ ಸ್ವಸಹಾಯ ಸಂಘ ರಚಿಸುವ ಗುರಿ ಹೊಂದಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ತಿಳಿಸಿದರು.

ತಾಲ್ಲೂಕಿನ ದುಮ್ಮಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 101 ನೇ ಸ್ವಸಹಾಯ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆಯ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಸುಮಾರು ರೂ. 10 ಕೋಟಿ ಮೀಸಲಿಡುವ ಗುರಿ ಇದೆ. 1982ರಲ್ಲಿ ಗ್ರಾಮೀಣರ ಸಬಲೀಕರಣದ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದ್ದು, ಅನುಷ್ಠಾನಗೊಂಡ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ಸು ಕಂಡಿದ್ದೇವೆ. ನೈರ್ಮಲ್ಯ, ಸ್ವಾವಲಂಬನೆ, ಕೃಷಿ, ಸಣ್ಣ ಕೈಗಾರಿಕೆ, ಬಡತನ ನಿರ್ಮೂಲನೆ ಮೊದಲಾದ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಭಾರತಿ ಕಲ್ಲೇಶ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾದಾಗ ಮಾತ್ರ ಕುಟುಂಬ, ಸಮಾಜ ಅಭಿವೃದ್ಧಿ ಆಗುತ್ತದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳ ನೆರವು ಪಡೆದು ಆರ್ಥಿಕವಾಗಿ ಸದೃಢರಾಗಲು ಪ್ರಯತ್ನಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹಲವು ಕಾರ್ಯಕ್ರಮಗಳಿದ್ದು, ಉಪಯೋಗ ಪಡೆಯಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಆರ್. ಶಿವಕುಮಾರ್, ನಬಾರ್ಡ್ ಡಿಡಿಎಂ ಪ್ರಕಾಶ್ ಭಂಡಾರಿ, ತಾಲ್ಲೂಕು ಪಂಚಾಯ್ತಿ ಸದಸ್ಯ ರವಿ, ಎಸ್. ವೇದಮೂರ್ತಿ, ಹೊಲದಪ್ಪ, ಜಿಲ್ಲಾ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್, ಮಹಾಂತೇಶ್ ಇದ್ದರು.
ಎಸ್. ಜನಾರ್ದನ್ ಸ್ವಾಗತಿಸಿದರು. ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಓಂಕಾರಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.