ADVERTISEMENT

ಚಿತ್ರದುರ್ಗ | ಗ್ರಾ.ಪಂ.ಗಳಿಗೆ ₹200 ಕೋಟಿ ಅನುದಾನ

ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸಲು ಶಾಸಕ ಎಂ.ಚಂದ್ರಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 7:19 IST
Last Updated 23 ಜನವರಿ 2022, 7:19 IST
ಎಂ.ಚಂದ್ರಪ್ಪ
ಎಂ.ಚಂದ್ರಪ್ಪ   

ಹೊಳಲ್ಕೆರೆ: ಪುರಸಭೆ ಸೇರಿ ತಾಲ್ಲೂಕಿನ 29 ಗ್ರಾಮ ಪಂಚಾಯಿತಿ ಗಳಿಗೆ ₹200 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ಶನಿವಾರ ಪಟ್ಟಣದ ಮೈರಾಡ ತರಬೇತಿ ಕೇಂದ್ರದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪ್ರತೀ ಗ್ರಾಮ ಪಂಚಾಯಿತಿಗೆ ₹4 ಕೋಟಿಯಿಂದ ₹9 ಕೋಟಿವರೆಗೆ ಅನುದಾನ ಹಂಚಿಕೆ ಮಾಡಲಾಗಿದೆ. ಕೆರೆ ಹೂಳೆತ್ತುವುದು, ಶಾಲೆ ಕಾಂಪೌಂಡ್ ನಿರ್ಮಾಣ, ಅಂಗನವಾಡಿ, ಶಾಲೆಗಳಿಗೆ ಶೌಚಾಲಯ ನಿರ್ಮಾಣ, ಕಾಂಕ್ರೀಟ್ ಚರಂಡಿ ಹಾಗೂ ಗ್ರಾಮ ನೈರ್ಮಲ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳ ಕ್ರಿಯಾ ಯೋಜನೆ ರಚಿಸಿ ಮೂರು ದಿನಗಳಲ್ಲಿ ಸಲ್ಲಿಸಬೇಕು. ಕ್ರಿಯಾಯೋಜನೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅವ ರಿಂದ ತಕ್ಷಣವೇ ಮಂಜೂರಾತಿ ಕೊಡಿಸಲಾ ಗುವುದು. ಮೂರು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳನ್ನು ಮುಗಿಸಬೇಕು. ಈ ಕೆಲಸಗಳು ಮುಗಿದ ನಂತರ ಮತ್ತೆ ₹100 ಕೋಟಿ ಅನುದಾನ ಮಂಜೂರು ಮಾಡಿಸಲಾಗುವುದು’ ಎಂದರು.

ADVERTISEMENT

‘ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 1,090 ಮನೆಗಳು, ಪುರಸಭೆ ವ್ಯಾಪ್ತಿಯಲ್ಲಿ 500 ಮನೆಗಳನ್ನು ಮಂಜೂರು ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು 15ನೇ ಹಣಕಾಸು ಯೋಜನೆಯಡಿ ₹10.5 ಕೋಟಿ ಮೀಸಲಿಡಲಾಗಿದೆ. ತಾಲ್ಲೂಕು ಪಂಚಾಯಿತಿ ಇಒ ಹಾಗೂ ಪಿಡಿಒಗಳು ಮೇಲುಸ್ತವಾರಿ ನಡೆಸಿ ಕಾಮಗಾರಿ ಮುಗಿಸಬೇಕು. ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವವರು ಕೆಲಸ ಮಾಡಬಹುದು. ಇದರಿಂದ ಗುಳೆ ಹೋಗುವುದು ತಪ್ಪುತ್ತದೆ. ಇಷ್ಟು ದೊಡ್ಡ ಮಟ್ಟದ ಅನುದಾನ ನೀಡಿರುವುದು ಇದೇ ಮೊದಲು’ ಎಂದರು.

‘ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ನೀರಾವರಿ, ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಕೆಲವು ಕಾಮಗಾರಿಗಳು ಮುಗಿದಿದ್ದು, ಕೆಲವು ಕೆಲಸಗಳು ಪ್ರಗತಿಯಲ್ಲಿವೆ. ಪಟ್ಟಣದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ-13ರ ವಿಸ್ತರಣೆಗೆ ಇದ್ದ ಕಾನೂನು ತೊಡಕುಗಳು ಮುಗಿದಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಆರು ಪಥದ ರಸ್ತೆ ನಿರ್ಮಾಣ ಆಗಲಿದ್ದು, ಸುಗಮ ಸಂಚಾರಕ್ಕೆ ಅನುಕೂಲ ಆಗಲಿದೆ. ಇನ್ನೂ ಹಲವು ಯೋಜನೆಗಳು ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ಹಂತದಲ್ಲಿವೆ. ಇನ್ನು ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಇಲ್ಲಿಗೆ ಬಂದು ಬೃಹತ್ ಕಾಮಗಾರಿಗಳಿಗೆ ಚಾಲನೆ ನೀಡುವರು’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಇದಕ್ಕೂ ಮೊದಲು 29 ಗ್ರಾಮ ಪಂಚಾಯಿತಿಗಳ ಪಿಡಿಒ, ಕಾರ್ಯದರ್ಶಿ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ಮಾಹಿತಿ ನೀಡಲಾಯಿತು. ತಾಲ್ಲೂ ಪಂಚಾಯಿತಿ ಇಒ ಗಂಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.