ADVERTISEMENT

24ರಂದು ಚಳ್ಳಕೆರೆ ಬಂದ್‌ಗೆ ಕರೆ

ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ರೈತ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 6:29 IST
Last Updated 14 ಡಿಸೆಂಬರ್ 2013, 6:29 IST

ಚಳ್ಳಕೆರೆ: ನಿರಂತರ ಬರಗಾಲಕ್ಕೆ ತುತ್ತಾಗಿರುವ ಚಳ್ಳಕೆರೆ ತಾಲ್ಲೂಕಿನ ರೈತರ ಬದುಕಿಗೆ ಆಸರೆಯಾಗಬೇಕಿರುವ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕಿನ ಎಲ್ಲಾ ಕೆರಗಳಿಗೂ  ನೀರು ಹರಿಸುವಂತೆ ಆಗ್ರಹಿಸಿ ಡಿ.24 ರಂದು ಚಳ್ಳಕೆರೆ ಬಂದ್ ಮಾಡುವುದಾಗಿ ವಿವಿಧ ಸಂಘ ಸಂಸ್ಥೆಗಳು ನಿರ್ಧರಿಸಿವೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಸಭಾಂಗಣದಲ್ಲಿ ರೈತರು ಹಾಗು ವಿವಿಧ ಸಂಘ ಸಂಸ್ಥೆಗಳು ಜತೆಗೂಡಿ ಭದ್ರಾ ಮೇಲ್ದಂಡೆ ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ  ಬಂದ್ ಆಚರಿಸಲು ಒಗ್ಗಟ್ಟಿನಿಂದ  ಬೆಂಬಲ ಸೂಚಿಸಿದವು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತರು ಹಲವಾರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ನಷ್ಟ ಅನುಭವಿಸುತ್ತಿದ್ದಾರೆ.

ಶಾಶ್ವತ ನೀರಾವರಿಗಾಗಿ ಹೋರಾಟ ಮಾಡುತ್ತಾ ಬಂದರೂ ಯಾವುದೇ ಸರ್ಕಾರಗಳು ದೇಶದ ಬನ್ನೆಲುಬಾಗಿರುವ ರೈತರ ಬೆಂಬಲಕ್ಕೆ ನಿಲ್ಲದೆ ವಂಚಿಸುತ್ತಿವೆ. ಹೋರಾಟದ ಫಲವಾಗಿ ಯೋಜನೆ ಅನುಷ್ಠಾನಕ್ಕೆ ಬಂದರೂ ಅತೀ ದೊಡ್ಡ ತಾಲ್ಲೂಕಾದ ಚಳ್ಳಕೆರೆಗೆ ಕೇವಲ
9 ಕೆರೆಗಳಿಗೆ ಮಾತ್ರ ನೀರು ಹರಿಸುವುದರಿಂದ ಕೆಲವೇ ರೈತರಿಗೆ ಮಾತ್ರ ನೀರಿನ ಸೌಲಭ್ಯ ದೊರೆಯುತ್ತದೆ. ಇದರಿಂದ ಉಳಿದ ಭಾಗದ ಇತರ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಮ್ಯುನಿಸ್ಟ್‌ ಪಕ್ಷದ ಸಿ.ವೈ.ಶಿವರುದ್ರಪ್ಪ ಮಾತನಾಡಿ, ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವ ರೈತರು ಅಸಹನೀಯ ಬದುಕನ್ನು ದೂಡುತ್ತಿದ್ದಾರೆ. ಚಳ್ಳಕೆರೆಯು ಅತೀದೊಡ್ಡ ತಾಲ್ಲೂಕಾಗಿರುವುದರಿಂದ ಇಲ್ಲಿನ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹರಿಸಬೇಕು. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಸಂಘಟನೆಗಳು ಒಟ್ಟುಗೂಡಿ ಹೋರಾಟವನ್ನು ಮಾಡಲಾಗುವುದು ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇಶಪ್ಪ ಮಾತನಾಡಿ, ಆಡಳಿತ ನಡೆಸುವವರು ರೈತರ ಸಮಸ್ಯಗಳಿಗೆ ಸ್ಪಂದಿಸುತ್ತಿಲ್ಲ. ರೈತರ ನೋವು, ಬದುಕು, ಬವಣೆಯನ್ನು ಅರ್ಥ ಮಾಡಿಕೊಳ್ಳುವುದು ದೂರದ ಮಾತಾಗಿದೆ. ತಲೆತಲೆಮಾರುಗಳಿಂದಲೂ ವ್ಯವಸಾಯವನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರ ಪರವಾಗಿ ಸರ್ಕಾರ ನಿಲ್ಲಬೇಕು. ಭದ್ರಾ ಮೇಲ್ದಂಡೆ ಯೋಜನೆ ಪರಿಪೂರ್ಣ ಜಾರಿಯಿಂದ ಮಾತ್ರ ನಮ್ಮ ಹಸಿವು ನೀಗಲು ಸಾಧ್ಯ ಎಂದರು.

ಶಾಸಕ ಟಿ.ರಘುಮೂರ್ತಿ ಹೋರಾಟಗಾರರಿಗೆ ಪ್ರತಿಕ್ರಿಯೆ ನೀಡಿ, ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರೈತರ ಏಳಿಗೆಗೆ ಸರ್ಕಾರ ಯಾವಾಗಲೂ ಬದ್ದವಾಗಿರುತ್ತದೆ. ಈಗಾಗಲೇ ಶಿಡ್ಲಯ್ಯನಕೋಟೆಯಿಂದ ರಾಣಿಕೆರೆಗೆ ನೀರು ಹರಿಸಲು 35 ಕಿ.ಮೀ. ಫಿಡರ್ ಚಾನೆಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪರಶುರಾಂಪುರ ಭಾಗದ 5 ಕೆರೆಗಳ ಅಭಿವೃದ್ಧಿಗಾಗಿ ₨ 5 ಕೋಟಿ ಅನುದಾನ ನೀಡಲಾಗಿದೆ. ಇದರ ಜತೆಗೆ ತಾಲ್ಲೂಕಿನ ಸಮಗ್ರ ನೀರಾವರಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳಿದರು.

ಆಟೋ ಚಾಲಕ ಸಂಘದ ಅಧ್ಯಕ್ಷ ಪ್ರಶಾಂತ್, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಚಾಲಕ ತಿಪ್ಪೇಸ್ವಾಮಿ ಮಾತನಾಡಿ ಹೋರಾಟಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಅಧ್ಯಕ್ಷ ಗೋವಿಂದರಾಜು, ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಸಿದ್ದೇಶ್, ಎಚ್.ಎಸ್. ಸೈಯದ್, ದೊಡ್ಡ ಉಳ್ಳಾರ್ತಿ ಕರಿಯಣ್ಣ, ತಾಲ್ಲೂಕಿನ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಶಿಕ್ಷಕರಿಗೂ ಅಧ್ಯಯನ ಅಗತ್ಯ’
ಚಳ್ಳಕೆರೆ: ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ ಎಂದು ಡಯೆಟ್ ಉಪನ್ಯಾಸಕಿ ಆರ್.ವಿ. ಸುಧಾ ಹೇಳಿದರು. ಪಟ್ಟಣದ ರೋಟರಿ ಕ್ಲಬ್ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಲ್ಲಿ ನಡೆದ ತಾಲ್ಲೂಕಿನ ಆಯ್ದ 150 ಪ್ರಾಥಮಿಕ ಶಾಲಾ ಶಿಕ್ಷಕರಿಗೆ  ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಜಣ್ಣ ಮಾತನಾಡಿ, ಶಿಕ್ಷಕರು ವೃತ್ತಿಯಲ್ಲಿ ಶ್ರದ್ಧೆಯಿಂದ ಪರಿಣಾಮ ಕಾರಿಯಾಗಿ ಭೋಧನೆ ಮಾಡಿದಾಗ ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿಸಲು  ಸಾಧ ಎಂದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಆರ್.ಹನುಮಂತರಾಯ ಮಾತನಾಡಿ, ಶಿಕ್ಷಕರು ತರಗತಿಗಳಲ್ಲಿ ವಿದ್ಯಾರ್ಥಿಗಳ ನಡವಳಿಕೆಗಳನ್ನು ಗಮನಿಸಿ ಅವರನ್ನು ಸದೃಢರನ್ನಾಗಿ ಮಾಡಬೇಕು.

ಪ್ರಮುಖವಾಗಿ ಉದಾತ್ತ ವ್ಯಕ್ತಿತ್ವವನ್ನು ಹೊಂದಿ ಸಮಾಜಕ್ಕೆ ಮಾದರಿ ಆಗಬೇಕು ಎಂದು ಹೇಳಿದರು. ರೋಟರಿ ಕ್ಲಬ್ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಪ್ರೇಮಾ, ಎಸ್.ವೀರೇಶ್, ಡಾ.ಜಯಕುಮಾರ್, ಡಾ.ವೀರೇಶ್, ದೇವಂದ್ರಪ್ಪ, ಎನ್.ಮೂರ್ತಪ್ಪ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT