ADVERTISEMENT

24ರಿಂದ ಕೋಟೆ ನಗರಿಯಲ್ಲಿ ಸಾಹಿತ್ಯ ಕಲರವ

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬಿ.ಎಲ್.ವೇಣು ಆಯ್ಕೆ, ಸಮ್ಮೇಳನಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 5:39 IST
Last Updated 6 ಜೂನ್ 2013, 5:39 IST
ಖ್ಯಾತ ಸಾಹಿತಿ ಬಿ.ಎಲ್. ವೇಣು
ಖ್ಯಾತ ಸಾಹಿತಿ ಬಿ.ಎಲ್. ವೇಣು   

ಚಿತ್ರದುರ್ಗ: ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜೂನ್ 24 ಮತ್ತು 25ರಂದು ನಗರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ.

ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಸಾಹಿತಿ ಬಿ.ಎಲ್. ವೇಣು ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ಸಾಹಿತಿಗಳ ಹೆಸರುಗಳು ಕೇಳಿ ಬಂದವು. ಡಾ.ಬಿ. ರಾಜಶೇಖರಪ್ಪ, ಸಂಧ್ಯಾರೆಡ್ಡಿ, ಲೋಕೇಶ್ ಅಗಸನಕಟ್ಟೆ, ಚಂದ್ರಶೇಖರ ತಾಳ್ಯ, ರಾಘವೇಂದ್ರ ಪಾಟೀಲ್, ಶಿವಲಿಂಗಪ್ಪ ಮುಂತಾದವರ ಹೆಸರುಗಳು ಕೇಳಿ ಬಂದವು.

ಅಂತಿಮವಾಗಿ ಇದೇ ನೆಲದಲ್ಲಿ ಹುಟ್ಟಿ ಬೆಳೆದು, ಇಲ್ಲಿಯೇ ಸಾಹಿತ್ಯ ಕೃಷಿ ಮಾಡಿ ಖ್ಯಾತಿ ಗಳಿಸಿರುವ ಬಿ.ಎಲ್. ವೇಣು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ದಿನ ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನೀಲಕಂಠೇಶ್ವರ ದೇವಸ್ಥಾನದಿಂದ ನಡೆಯಲಿದೆ. ರಂಗಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯುವ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿವಮೂರ್ತಿ ಮುರುಘಾ ಶರಣರು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಹಾಗೂ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಮಧ್ಯಾಹ್ನ ಗೋಷ್ಠಿಗಳು ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಸಮ್ಮೇಳನದ ಅಂಗವಾಗಿ ಪುಸ್ತಕ ಮಳಿಗೆ ಮತ್ತು ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಜಿಲ್ಲೆಯ ಐವರು ಸಾಹಿತಿಗಳ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು. ಕವಿಗೋಷ್ಠಿಗೆ ಪ್ರತಿ ತಾಲ್ಲೂಕಿನಿಂದ ಐವರು ಕವಿಗಳನ್ನು ಆಯ್ಕೆ ಮಾಡಲಾಗುವುದು. ಕವಿಗಳ ಆಯ್ಕೆಯ ಜವಾಬ್ದಾರಿಯನ್ನು ಆಯಾ ತಾಲ್ಲೂಕು ಘಟಕಕ್ಕೆ ನೀಡಲಾಗಿದೆ. ಒಟ್ಟು 30 ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದ ಸಮಾರೋಪ ಸಮಾರಂಭಕ್ಕೆ ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಆಹ್ವಾನಿಸಲಾಗುವುದು. ಗೋಷ್ಠಿಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದು ಮಲ್ಲಿಕಾರ್ಜುನಯ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಕಸಾಪ ಘಟಕಗಳ ಅಧ್ಯಕ್ಷರು ಹಾಜರಿದ್ದರು.

ಕನ್ನಡ ಭವನಕ್ಕೆ ನಗರಸಭೆ ಕಟ್ಟಡ!
ಕನ್ನಡ ಭವನಕ್ಕಾಗಿ ನಗರಸಭೆ ಹಳೇ ಕಟ್ಟಡ ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಪ್ರತಿಪಾದಿಸಿದರು.

ಸದ್ಯಕ್ಕೆ ಪಿಳ್ಳೇಕೆರೆನಹಳ್ಳಿಯಲ್ಲಿ ಕನ್ನಡ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಕೇವಲ ರೂ 11ಲಕ್ಷ ಲಭ್ಯವಿದೆ. ಆದರೆ, ಭವನಕ್ಕೆ ಸುಮಾರು ರೂ .2 ಕೋಟಿ ಅಗತ್ಯವಿದೆ. ಜಿಲ್ಲಾ ಸಮ್ಮೇಳನದಲ್ಲಿ ಕನ್ನಡ ಭವನ ನಿರ್ಮಿಸಲು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಲಾಗುವುದು. ಹೊಸ ಕಟ್ಟಡ ನಿರ್ಮಿಸುವ ಬದಲಾಗಿ ಹಳೇ ನಗರಸಭೆ ಕಟ್ಟಡವನ್ನು ಕನ್ನಡ ಭವನಕ್ಕೆ ನೀಡಿದರೆ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತದೆ. ಈ ಬಗ್ಗೆ ಮನವಿ ಮಾಡಲಾಗುವುದು ಎಂದು ನುಡಿದರು.

ನಗರದಲ್ಲಿ ಈ ಹಿಂದೆ ನಡೆದ ಅಖಿಲ ಭಾರತ 75ನೇ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ನೆನೆಗುದಿಗೆ ಬಿದ್ದಿದ್ದು, ಸಾಧ್ಯವಾದರೆ ಈ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT