ADVERTISEMENT

ವಿ.ವಿ.ಸಾಗರಕ್ಕೆ 24 ಟಿಎಂಸಿ ಅಡಿ ನೀರು: ಸಚಿವ ರಮೇಶ ಜಾರಕಿಹೊಳಿ

ಚಿತ್ರದುರ್ಗಕ್ಕೆ ಹರಿಯಲಿದೆ ಎತ್ತಿನಹೊಳೆ

​ಪ್ರಜಾವಾಣಿ ವಾರ್ತೆ
Published 12 ಮೇ 2020, 16:03 IST
Last Updated 12 ಮೇ 2020, 16:03 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಚಿತ್ರದುರ್ಗ: ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ 24 ಟಿಎಂಸಿ ಅಡಿ ನೀರನ್ನು ಮುಂದಿನ ಎರಡು ವರ್ಷ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಹೊಳಲ್ಕೆರೆ ತಾಲ್ಲೂಕಿನ ಗೂಳಿಹೊಸಹಳ್ಳಿ ಹಾಗೂ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಸಮೀಪ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ಸುರಂಗ ನಿರ್ಮಾಣದ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎತ್ತನಹೊಳೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷವಾಗುತ್ತದೆ. ಯೋಜನೆಯಲ್ಲಿ ಲಭ್ಯವಿರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಜಲಾಶಯ ಇರುವುದು ಮಾರಿಕಣಿವೆಯಲ್ಲಿ ಮಾತ್ರ. ಯೋಜನೆ ಪೂರ್ಣವಾಗುವವರೆಗೂ ವಿ.ವಿ.ಸಾಗರಕ್ಕೆ ನೀರು ಹರಿಸಲು ತೀರ್ಮಾನಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಎತ್ತಿನಹೊಳೆಯಿಂದ ವಿ.ವಿ.ಸಾಗರಕ್ಕೆ ನೀರು ಹರಿಸುವ ಕಾಮಗಾರಿ ಮುಂಬರುವ ಜನವರಿ ಹೊತ್ತಿಗೆ ಮುಗಿಯುವ ಸಾಧ್ಯತೆ ಇದೆ. ಮಾರ್ಚ್ ವೇಳೆಗೆ ವಿ.ವಿ.ಸಾಗರಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು. ಎರಡು ವರ್ಷಗಳ ಬಳಿಕವೂ ಜಲಾಶಯಕ್ಕೆ ನೀರು ಹರಿಸಬೇಕೆ ಎಂಬುದನ್ನು ಸರ್ಕಾರ ತೀರ್ಮಾನಿಸಲಿದೆ. ಆದರೆ, ವಿ.ವಿ.ಸಾಗರಕ್ಕೆ ಶಾಶ್ವತವಾಗಿ ನೀರು ಹಂಚಿಕೆ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

48 ಕೆರೆ ಭರ್ತಿ:‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಸೇರಿದರೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ. ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ ಇದು ರಾಷ್ಟ್ರೀಯ ಯೋಜನೆಯಾಗಿ ಪರಿವರ್ತನೆ ಹೊಂದಲಿದೆ. ಕಾಮಗಾರಿಯನ್ನು ಇನ್ನಷ್ಟು ತ್ವರಿತವಾಗಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ’ ಎಂದು ಮಾಹಿತಿ ನೀಡಿದರು.

‘ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 2008ರಲ್ಲಿ ಚಾಲನೆ ನೀಡಿದರು. ಆರಂಭದಲ್ಲಿ ಇದಕ್ಕೆ ₹ 6 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿತ್ತು. 2016ಕ್ಕೆ ಯೋಜನೆ ಮುಕ್ತಾಯವಾಗಬೇಕಿತ್ತು. ಭೂಸ್ವಾಧೀನ ಹಾಗೂ ಅರಣ್ಯ ಪ್ರದೇಶದ ಅಡಚಣೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ’ ಎಂದು ಹೇಳಿದರು.

‘ಮುಂಬರುವ ಜೂನ್ ವೇಳೆಗೆ ಚಿತ್ರದುರ್ಗ ಜಿಲ್ಲೆಯ 48 ಕೆರೆಗಳಿಗೆ ನೀರು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬುದು ಸರ್ಕಾರದ ಗುರಿ. ವಿ.ವಿ.ಸಾಗರಕ್ಕೆ ಐದು ಟಿಎಂಸಿ ಅಡಿ ನೀರಿಗೆ ಬೇಡಿಕೆ ಇದೆ. ಯೋಜನೆಯಲ್ಲಿ ಹಂಚಿಕೆಯಾದ ರೀತಿಯಲ್ಲಿ ನೀರು ಹರಿಸಲಾಗುತ್ತದೆ’ ಎಂದು ವಿವರಿಸಿದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ವಿಶ್ವೇಶ್ವರಯ್ಯ ಜಲ ನಿಮಗದ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ರಾವ್ ಪೇಶ್ವೆ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ರಾಘವನ್, ಅಧೀಕ್ಷಕ ಎಂಜಿನಿಯರ್ ವೇಣುಗೋಪಾಲ್, ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಹಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.