ADVERTISEMENT

25ಕ್ಕೆ ವಿಧಾನಸೌಧ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 7:20 IST
Last Updated 16 ಏಪ್ರಿಲ್ 2012, 7:20 IST

ಚಿತ್ರದುರ್ಗ: ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಏ. 25ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದರೂ ಸಹ ರಾಜ್ಯ ಸರ್ಕಾರ ತಾತ್ಕಾಲಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಕಾಯಂ ಬರಗಾಲ ಹೋಗಲಾಡಿಸುವಂತಹ ಯಾವುದೇ ಕಾರ್ಯಕ್ರಮ ಜಾರಿಗೆ ತರದ ಹಿನ್ನೆಲೆಯಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ, ಆಹಾರ ಧಾನ್ಯಗಳ ಕೊರತೆಯಾಗಿ ರೈತರು ಕಂಗಾಲಾಗಿದ್ದಾರೆ. ಆದರೆ, ಬ್ಯಾಂಕ್‌ಗಳು ರೈತರ ಸಾಲ ವಸೂಲಾತಿ, ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡುತ್ತಾ ಆರ್ಥಿಕ ಹೊರೆ ಹೆಚ್ಚಿಸುತ್ತಿವೆ. ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ಹೊಸ ಸಾಲ ನೀಡಿ ಆರ್ಥಿಕ ಹೊರೆ ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು.

ಬರಗಾಲದಿಂದ ರಾಜ್ಯದಲ್ಲಿ ರೂ.4,400 ಕೋಟಿ ಬೆಳೆ ಹಾನಿಯಾಗಿದೆ. ಆದರೆ, ರಾಜ್ಯ ಸರ್ಕಾರ ಬರ ನಿರ್ವಹಣೆಗೆ ರೂ.320 ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ತಿಳಿಸಿದೆ. ಇದರಿಂದ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುವುದರಿಂದ ರೈತರ ಬವಣೆ ನೀಗುವುದಿಲ್ಲ. ಬರ ನಿರ್ವಹಣೆಗಾಗಿ ಪ್ರತ್ಯೇಕ ನಿಧಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಬರಗಾಲ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಬಜೆಟ್‌ನಲ್ಲಿ ಸರ್ಕಾರಿ ನೌಕರರಿಗೆ ಶೇ. 22.4ರಷ್ಟು ವೇತನ ಹೆಚ್ಚಳ ಮಾಡುವ ಅಗತ್ಯವಾದರೂ ಏನಿತ್ತು? ನೌಕರರು ಈ ಬಗ್ಗೆ ಯಾವುದೇ ಗಡುವು ನೀಡಿದ್ದರೂ ಚುನಾವಣೆ ದೃಷ್ಟಿಯಿಂದ ವೇತನ ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಜಿಲ್ಲೆಗೆ ರೂ.5 ಕೋಟಿ ಹಣ ಬಿಡುಗಡೆ ಮಾಡಿ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಠ 10 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸಮರ್ಪಕವಾಗಿ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಅವರು ಆಗ್ರಹಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಜಾಪ್ರಗತಿ ರಂಗದಿಂದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. ಶನಿವಾರ ಪ್ರಜಾಪ್ರಗತಿ ರಂಗ ಅಸ್ತಿತ್ವಕ್ಕೆ ಬಂದಿದ್ದು, ರೈತ ಸಂಘ ಸೇರಿದಂತೆ 17 ವಿವಿಧ ಸಂಘಟನೆಗಳು ಸೇರಿಕೊಂಡಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಅನಿಷ್ಟ ಪದ್ಧತಿ ಹೋಗಲಾಡಿಸಿ ಪರ್ಯಾಯವಾಗಿ ಜನಪರ ಹೋರಾಟದ ಉದ್ದೇಶವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.