ADVERTISEMENT

ಜಿಲ್ಲೆಯಲ್ಲಿ 3 ಸಾವಿರ ಅನಧಿಕೃತ ಆಟೊ ಓಡಾಟ

ಕೆಡಿಪಿ ಪ್ರಗತಿ ಪರಿಶೀಲನಾ ಸಭೆ; ಸಮರ್ಪಕ ಮಾಹಿತಿ ನೀಡದ ಆರ್‌ಟಿಒಗೆ ಶಾಸಕರಿಂದ ತರಾಟೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 6:12 IST
Last Updated 20 ಜನವರಿ 2026, 6:12 IST
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಚಿತ್ರದುರ್ಗ: ಜಿಲ್ಲೆಯಾದ್ಯಂತ 3,000 ಆಟೊಗಳು ಅನಧಿಕೃತವಾಗಿ ಓಡಾಡುತ್ತಿವೆ. ನಗರ ಸೇರಿದಂತೆ ಹಲವು ಪಟ್ಟಣಗಳಲ್ಲಿ ಆಟೊಗಳಿಂದಲೇ ಟ್ರಾಫಿಕ್‌ ಕಿರಿಕಿರಿಯುಂಟಾಗುತ್ತಿದೆ ಎನ್ನುವ ವಿಷಯ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿತು. 

ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಿಂದ ಚಳ್ಳಕೆರೆ ಗೇಟ್‌ವರೆಗೆ ಬಿ.ಡಿ ರಸ್ತೆಯಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಿರುವ ವಿಷಯವನ್ನು ಶಾಸಕ ಟಿ.ರಘುಮೂರ್ತಿ ಪ್ರಸ್ತಾಪಿಸಿದರು. ಈ ವೇಳೆ ಮಾತನಾಡಿದ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ‘ಹೆಚ್ಚಿನ ಸಂಖ್ಯೆಯಲ್ಲಿ ಆಟೊಗಳಿಗೆ ಅನುಮತಿ ನೀಡಿರುವುದೇ ಟ್ರಾಫಿಕ್‌ ಸಮಸ್ಯೆಗೆ ಕಾರಣ. ಜಿಲ್ಲೆಯಲ್ಲಿ ಎಷ್ಟು ಆಟೊಗಳಿಗೆ ಅನುಮತಿ ನೀಡಲಾಗಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಪ್ರಶ್ನಿಸಿದರು. 

ಉತ್ತರ ನೀಡಿದ ಆರ್‌ಟಿಒ ಭರತ್‌ ಕಾಳಸಿಂಘೆ ‘ಜಿಲ್ಲೆಯಾದ್ಯಂತ 10,800 ಆಟೊಗಳಿವೆ. ಅವುಗಳಲ್ಲಿ 7,800 ಆಟೊಗಳು ಮಾತ್ರ ಅನುಮತಿ ಪಡೆದಿದ್ದು ಮಿಕ್ಕ 3,000 ಆಟೊಗಳು ಅನಧಿಕೃತವಾಗಿ ಓಡಾಡುತ್ತಿವೆ. ಆಟೊ ಮಾಲೀಕರು ಅನಧಿಕೃತವಾಗಿ ಉಪ ಗುತ್ತಿಗೆ ನೀಡಿ ಆಟೊ ಓಡಿಸುತ್ತಿದ್ದಾರೆ’ ಎಂದರು. ‘ಪ್ರತಿ ತಾಲ್ಲೂಕಿನಲ್ಲಿ ಎಷ್ಟು ಆಟೊಗಳಿವೆ, ಎಷ್ಟು ದೂರದ ಮಾನದಂಡದ ಮೇಲೆ ಅನುಮತಿ ನೀಡಲಾಗುತ್ತಿದೆ’ ಎಂದು ಶಾಸಕ ರಘುಮೂರ್ತಿ ಪ್ರಶ್ನಿಸಿದರು. 

ADVERTISEMENT

‘ಕ್ಷೇತ್ರವಾರು ಆಟೊ ಮಾಹಿತಿ ಇಲ್ಲ’ ಎಂದು ಆರ್‌ಟಿಒ ಹೇಳುತ್ತಿದ್ದಂತೆ ಶಾಸಕರು ಅವರ ವಿರುದ್ಧ ಮುಗಿಬಿದ್ದರು. ‘ಆಟೊಗಳ ಮಾಹಿತಿಯೇ ಇಲ್ಲವೆಂದರೆ ನೀವು ಏಕೆ ಕೆಲಸ ಮಾಡುತ್ತಿದ್ದೀರಿ, ಸಣ್ಣ ಮಾಹಿತಿಯೂ ಇಲ್ಲವೆಂದರೆ ಏನರ್ಥ, ಕೇವಲ ನಗರದ ಹೊರಗೆ, ಹೆದ್ದಾರಿಯಲ್ಲಿ ನಿಂತು ಗಾಡಿ ಹಿಡಿಯುವುದೇ ನಿಮ್ಮ ಕೆಸಲವೇ’ ಎಂದು ಶಾಸಕ ಎಂ.ಚಂದ್ರಪ್ಪ ಪ್ರಶ್ನಿಸಿದರು. ಶಾಸಕರು, ಪ್ರಾದೇಶಿಕ ಆಯುಕ್ತರು ಆರ್‌ಟಿಒ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. 

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ ‘ವಿವಿಧ ಕಾಮಗಾರಿಗೆ ಪರಿಕರ ತರುವ ಲಾರಿಗಳನ್ನು ಹಿಡಿದು ಅಕ್ರಮವಾಗಿ ದಂಡ ಹಾಕುತ್ತಿದ್ದೀರಿ. ಲಾರಿ ಖಾಲಿ ಇದ್ದರೂ ಲೋಡ್‌ ಲಾರಿ ಹೆಸರಿನಲ್ಲಿ ಪ್ರಕರಣ ದಾಖಲು ಮಾಡಿದ್ದೀರಿ, ನಿಮಗೆ ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು. ‘ಲೋಕೋಪಯೋಗಿ ಸೇರಿದಂತೆ ಕಾಮಗಾರಿಗಳಿಗೆ ಪರಿಕರ ಸಾಗಿಸುವ ಲಾರಿಗಳನ್ನು ಹಿಡಿದರೆ ಕ್ರಮ ಜರುಗಿಸಲಾಗುವುದು’ ಎಂದು ಆರ್‌ಟಿಒ ಭರತ್‌ ಕಾಳಸಿಂಘೆ ಅವರಿಗೆ ಎಚ್ಚರಿಕೆ ನೀಡಿದರು. 

‘ಬಿ.ಡಿ.ರಸ್ತೆಯಲ್ಲಿ ಬಸ್‌ ಸಂಚಾರ ನಿಷೇಧ ಮಾಡಿರುವ ಕಾರಣ ವಿದ್ಯಾರ್ಥಿಗಳಿಗೆ, ಜಿಲ್ಲಾಸ್ಪತ್ರೆಯ ರೋಗಿಗಳಿಗೆ, ರೈತರಿಗೆ ತೊಂದರೆಯಾಗಿದೆ. ಮೊದಲಿನಂತೆಯೇ ಬಸ್‌ ಓಡಾಟ ಮುಂದುವರಿಸಬೇಕು’ ಎಂದು ರಘುಮೂರ್ತಿ ಸೂಚಿಸಿದರು. 

ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಮಾತನಾಡಿ ‘ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳುವ ರಸ್ತೆ ಕಾಮಗಾರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅನಾವಶ್ಯಕವಾಗಿ ತಡೆಯುತ್ತಿದ್ದಾರೆ. ಹಿರಿಯೂರು ಹಾಗೂ ಹೊಸದುರ್ಗ ನಡುವಿನ ಗ್ರಾಮೀಣ ರಸ್ತೆಗಳ ಸುಧಾರಣಾ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಯಾಗಿದೆ’ ಎಂದು ಆರೋಪಿಸಿದರು. 

ಇದಕ್ಕೆ ಧ್ವನಿಗೂಡಿಸಿದ ಶಾಸಕ ಎಂ.ಚಂದ್ರಪ್ಪ ‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಕಾಮಗಾರಿಗಳಿಗೆ ಅನುಮತಿ ನೀಡುವಾಗ ಅರಣ್ಯ ಭೂಮಿಯಲ್ಲೂ ಕಾಮಗಾರಿ ನಡೆಸಬಹುದು ಎಂಬ ಉಲ್ಲೇಖವಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಮಗಾರಿಯನ್ನು ತಡೆಯುವುದು ಸರಿಯಲ್ಲ’ ಎಂದು ಹೇಳಿದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಪ‍್ರತಿಕ್ರಿಯಿಸಿ ‘ಈಗಾಗಲೇ ಇರುವ ರಸ್ತೆಗಳ ಸುಧಾರಣೆ ಮಾಡುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತಡೆಯಬಾರದು’ ಎಂದು ಸೂಚಿಸಿದರು. 

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಅಧಿಕಾರಿಗಳು ‘ಜಿಲ್ಲೆಯಲ್ಲಿ ಕಳೆದ 3 ತಿಂಗಳಿಂದೀಚೆಗೆ 300 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಲಾಗಿದೆ’ ಎಂದರು. ‘ನೀರಿನ ಘಟಕಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ಗ್ರಾಮ ಪಂಚಾಯಿತಿಯಿಂದಲೇ ರಿಪೇರಿ ಮಾಡಿಸಬೇಕು’ ಎಂದು ರಘುಮೂರ್ತಿ ಸೂಚಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, ಶಾಸಕರಾದ ಎನ್‌.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ, ವಿಧಾನ ಪರಿಷತ್‌ ಸದಸ್ಯ ಡಿ.ಟಿ.ಶ್ರೀನಿವಾಸ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಶಿವಣ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ಇದ್ದರು.

ಜೆಜೆಎಂ ಅಕ್ರಮ: ಪರಿಶೀಲನೆಯಲ್ಲಿ ಪತ್ತೆ  ‘ಜಿಲ್ಲೆಯ ವಿವಿಧೆಡೆ ನಡೆದಿರುವ ಜಲಜೀವನ ಮಿಷನ್‌ ಕಾಮಗಾರಿಯಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಈ ಕುರಿತು ನಡೆದ ಪರಿಶೀಲನೆಯಲ್ಲಿ 20ಕ್ಕೂ ಹೆಚ್ಚು ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಕಾರಣವಾದ ಅಧಿಕಾರಿಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಆಕಾಶ್‌ ಹೇಳಿದರು.  ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಮಾತನಾಡಿ ‘ಜೆಜೆಎಂ ಅಕ್ರಮಗಳನ್ನು ಪತ್ತೆ ಹಚ್ಚಿರುವುದು ಉತ್ತಮ ಕೆಲಸ. ಅವರ ವಿರುದ್ಧ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಶಿಕ್ಷೆಯಾಗಬೇಕು. ಅಕ್ರಮವಾಗಿ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ಅನುಮತಿಯನ್ನೇ ರದ್ದು ಮಾಡಬೇಕು. ಜೊತೆಗೆ ಅವರಿಗೆ ಹೆಚ್ಚು ಮೊತ್ತದ ದಂಡ ವಿಧಿಸಬೇಕು’ ಎಂದು ತಿಳಿಸಿದರು.

ಕೋವಿಡ್‌: ₹35.46 ಕೋಟಿ ಅವ್ಯವಹಾರ  ‘ಕೋವಿಡ್‌ ಸಂದರ್ಭದಲ್ಲಿ ಜಿಲ್ಲೆಗೆ ವಿವಿಧ ಮೂಲಗಳಿಂದ ಬಂದ ₹35.46 ಕೋಟಿ ಅನುದಾನದಲ್ಲಿ ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ರೋಗಿಗಳಿಗೆ ವಿತರಣೆ ಮಾಡಲಾದ ಮಾತ್ರೆ ಮಾಸ್ಕ್‌ ಸೇರಿದಂತೆ ಇತರ ಔಷಧಿ ಪರಿಕರಗಳ ಖರೀದಿಯಲ್ಲಿ ನಿಗದಿತ ಬೆಲೆಗಿಂತ 10 ಪಟ್ಟು ಹೆಚ್ಚಿಗೆ ವೆಚ್ಚ ಮಾಡಿರುವುದು ಗೊತ್ತಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿವರ ಪಡೆಯಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ತಿಳಿಸಿದರು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ‘ಜನರು ಸಾವು–ಬದುಕಿನ ನಡುವೆ ಹೋರಾಟ ನಡೆಸುವ ಸಂದರ್ಭದಲ್ಲಿ ಹಲವು ಸಂಸ್ಥೆಗಳು ದಾರಾಳವಾಗಿ ಸಹಾಯ ಮಾಡಿದವು. ಆ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಅಕ್ಷಮ್ಯ. ಹಣ ತಿಂದವರನ್ನು ಸುಮ್ಮನೇ ಬಿಡಬಾರದು. ತಕ್ಕ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

ಶಾಲೆಗಳ ಆರ್‌ಟಿಸಿ ಬದಲಾವಣೆ ‘ಜಿಲ್ಲೆಯ ಕೆಲ ಶಾಲೆಗಳ ಜಾಗ ಇಲಾಖೆ ಹೆಸರಿಗೆ ಖಾತೆಯಾಗಿಲ್ಲ. ದಾನ ನೀಡಿದವರ ಕುಟುಂಬಗಳ ಸದಸ್ಯರು ಈಗ ತೊಂದರೆ ನೀಡುತ್ತಿದ್ದಾರೆ. ಜಾಗ ವಾಪಸ್‌ ನೀಡುವಂತೆ ಹಣ ಕೊಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು’ ಎಂದು  ಕೆಡಿಪಿ ಸದಸ್ಯರೊಬ್ಬರು ಒತ್ತಾಯಿಸಿದರು. ‘ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಜಾಗ ಇದ್ದಾಗ ಅದನ್ನು ಸ್ವಾಧೀನಕ್ಕೆ ಪಡೆಯುವುದು ಕಷ್ಟವಾಗಲಿದೆ. ಕಾನೂನಾತ್ಮಕವಾಗಿ ಆರ್‌ಟಿಸಿ ಬದಲಾವಣೆಗೆ ಕ್ರಮ ವಹಿಸಲಾಗುವುದು. ಗೊಂದಲ ಇರುವ ಶಾಲೆಗಳ ಮಾಹಿತಿ ಪಡೆಯಲಾಗುವುದು’ ಎಂದು ಜಿಲ್ಲಾಧಿಕಾರಿ ವೆಂಕಟೇಶ್‌  ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.