ADVERTISEMENT

52ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 8:38 IST
Last Updated 14 ಫೆಬ್ರುವರಿ 2026, 8:38 IST
ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ಜಾತ್ರೆಯ ಪೋಸ್ಟರ್ ಅನಾವರಣಗೊಳಿಸಿದರು
ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ಜಾತ್ರೆಯ ಪೋಸ್ಟರ್ ಅನಾವರಣಗೊಳಿಸಿದರು   

ಚಳ್ಳಕೆರೆ: 52ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಜ. 26 ರಿಂದ ಮಾ. 1ರ ವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು. 

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಾತ್ರಾ ಮಹೋತ್ಸವದ ಅಂಗವಾಗಿ ಜ. 21 ರಿಂದ 23ರ ವರೆಗೆ ಯುವ ಕ್ರೀಡಾಪಟುಗಳಿಗಾಗಿ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಗಳನ್ನು ಆಯೋಜಿಸಲಾಗಿದೆ. 28ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಂಸ್ಕೃತಿ ಉತ್ಸವದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. 100ಕ್ಕೂ ಹೆಚ್ಚು ಕವಿಗಳು ಭಾಗವಹಿಸುವರು. ಇದೇ ವೇಳೆ ಕವಿತ್ವಶ್ರೀ, ಮಹಾತ್ಮ ಕಾವ್ಯಾತ್ಮ, ದಾರಿ ದೀವಟಿಗೆಗಳು, ಶಿವ ಚಿತ್ರಲಿಂಗೇಶ್ವರ ವಾಣಿ ಪುಸ್ತಕಗಳನ್ನು ವಿವಿಧ ಮಠದ ಸ್ವಾಮೀಜಿಗಳು, ರಾಜಕೀಯ ಗಣ್ಯರು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು. 

ಮಾ. 1ರಂದು ಸಂಸ್ಕೃತ ಸಂಶೋಧನಾ ಕೇಂದ್ರದ ವತಿಯಿಂದ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಜಾನಪದ ಸಂಸ್ಕೃತಿಯ ಕುರಿತು ವಿಚಾರಗೋಷ್ಟಿ ನಡೆಯಲಿವೆ. ಅಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ವನಕಲ್ಲುಶ್ರೀ ಪ್ರಶಸ್ತಿ, ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪಗೆ ಜಗಜ್ಯೋತಿ ಪ್ರಶಸ್ತಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ. ಚಿಕ್ಕಪ್ಪಯ್ಯಗೆ ವಿಶ್ವಜ್ಯೋತಿ ಪ್ರಶಸ್ತಿ, ಸರ್.ಎಂ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಟಿ. ವೆಂಕಟೇಶಮೂರ್ತಿ ಅವರಿಗೆ ಸಿದ್ದಯೋಗಶ್ರೀ ಪ್ರಶಸ್ತಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರಿಗೆ ಬಾಲಗಂಗಾಧರನಾಥ ನಿರ್ಮಲ ಜ್ಯೋತಿ ಪ್ರಶಸ್ತಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗೆ ವಿ.ವೀರೇಶ್ ಅವರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಧ್ಯಾಹ್ನದಿಂದ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ವಿವರಿಸಿದರು.

ADVERTISEMENT

ಜಾತ್ರಾ ಮಹೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಚಿತ್ರದುರ್ಗ ಜಿಲ್ಲೆಯ ಶಾಸಕರು 45 ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. 

ಕಾಡುಗೊಲ್ಲ ಸಂಘದ ತಾಲ್ಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಪರುಶುರಾಂಪುರ ಘಟಕದ ಅಧ್ಯಕ್ಷ ಜಿ.ಟಿ. ಶಶಿಧರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗದ್ದುಗೆ ತಿಪ್ಪೇಸ್ವಾಮಿ, ಕಾಡುಗೊಲ್ಲ ಸಮುದಾಯದ ಮುಖಂಡರಾದ ಸುರೇಶ್ ಯಾದವ್, ಕೃಷ್ಣಮೂರ್ತಿ, ಇಂಡಸ್ ವ್ಯಾಲಿ ಶಾಲೆ ಸಂಸ್ಥಾಪಕ ಚಿಕ್ಕಣ್ಣ, ಶಿವಮೂರ್ತಿ ಬೊಮ್ಮನಕುಂಟೆ, ಓಬನಹಳ್ಳಿ ಮಂಜಣ್ಣ, ನೌಕರರ ಸಂಘದ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಇದ್ದರು.

‘ದಶಕಗಳ ಹೋರಾಟಕ್ಕೆ ಫಲ ಸಿಗಲಿದೆ’

ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ ನೇತೃತ್ವದ ಸಮಿತಿಯು ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿ.ಸೋಮಣ್ಣ ಗೋವಿಂದ ಕಾರಜೋಳ ಪ್ರಹ್ಲಾದ್ ಜೋಶಿ ಸೇರಿದಂತೆ 15 ಸಂಸದರನ್ನು ಭೇಟಿ ಮಾಡಿ ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸುವಂತೆ ಮನವಿ ನೀಡಿದೆ. ದೇವೇಗೌಡರು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಆದಷ್ಟು ಬೇಗ ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸುವಂತೆ ಒತ್ತಾಯಿಸಿದ್ದು ಮುಂದಿನ 6 ತಿಂಗಳೊಳಗೆ ಕಾಡುಗೊಲ್ಲರ 3 ದಶಕಗಳ ಹೋರಾಟಕ್ಕೆ ಫಲ ಸಿಗಲಿದೆ ಎಂಬ ವಿಶ್ವಾಸವಿದೆ’ ಎಂದು ವನಕಲ್ಲು ಮಲ್ಲೇಶ್ವರ ಮಠದ ಬಸವ ರಮಾನಂದ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.