ADVERTISEMENT

ತುಂಗಭದ್ರಾ ಹಿನ್ನೀರು ಯೋಜನೆಗೆ ಕೊನೆಗೂ ಅಸ್ತು

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 9:30 IST
Last Updated 3 ಜನವರಿ 2018, 9:30 IST

ಮೊಳಕಾಲ್ಮುರು: ಫ್ಲೋರೈಡ್‌ಯುಕ್ತ ಕುಡಿಯುವ ನೀರಿನಿಂದಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನ ಜನರಿಗೆ ನೆಮ್ಮದಿಯ ನಿಟ್ಟುಸಿರು ತರುತ್ತದೆ ಎನ್ನಲಾದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟ ಕೊನೆಗೂ ಮಂಗಳವಾರ ಒಪ್ಪಿಗೆ ನೀಡಿದೆ.

ನಾಲ್ಕು ವರ್ಷಗಳಿಂದ ತುಂಗಭದ್ರಾ ಹಿನ್ನೀರು ಯೋಜನೆಗೆ ಅಸ್ತು ದೊರೆಯಲಿದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ ವಿಳಂಬವಾಗುತ್ತಿರುವುದರಿಂದ ಜನರು ಯೋಜನೆ ಜಾರಿ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ಈ ವೇಳೆಯಲ್ಲಿ ₹ 2,352 ಕೋಟಿ ವೆಚ್ಚದಲ್ಲಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ಅಚ್ಚರಿ ಮೂಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಟಿ. ರಘುಮೂರ್ತಿ, ‘ಮೊಳಕಾಲ್ಮುರು, ಚಳ್ಳಕೆರೆ, ಕೂಡ್ಲಿಗಿ, ಪಾವಗಡ ತಾಲ್ಲೂಕುಗಳು ಹಾಗೂ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ 52 ಗ್ರಾಮಗಳ ಅಂದಾಜು 1000ಕ್ಕೂ ಹೆಚ್ಚು ಜನವಸತಿಗಳ 12–13 ಲಕ್ಷ ಜನರಿಗೆ ಇದರಿಂದ ಶುದ್ಧ ಕುಡಿಯುವ ನೀರು ದೊರೆಯಲಿದೆ. ಮುಖ್ಯಮಂತ್ರಿ ಚಳ್ಳಕೆರೆ ಸಾಧನೆ ಸಮಾವೇಶದಲ್ಲಿ ನೀಡಿದ್ದ ಭರವಸೆ ಪ್ರಕಾರ ಅನುಮೋದನೆ ನೀಡಿರುವುದು ಶ್ಲಾಘನೀಯ’ ಎಂದು ಹೇಳಿದರು.

ADVERTISEMENT

ಎರಡು ತಿಂಗಳ ಒಳಗಾಗಿ ಕಾಮಗಾರಿ ಆರಂಭವಾಗಲಿದೆ. ಶೀಘ್ರವೇ ಟೆಂಡರ್‌ ಅಂತಿಮವಾಗಲಿದೆ. ಚುನಾವಣೆ ಇರುವ ಕಾರಣ ಮಾರ್ಚ್‌ ತಿಂಗಳ ಒಳಗಾಗಿ ಕಾರ್ಯಾರಂಭವಾಗಲಿದೆ. ಅಗತ್ಯವಿದ್ದಲ್ಲಿ ನೀರಿನ ಸಂಗ್ರಹ, ಶುದ್ಧೀಕರಣ ಘಟಕ ನಿರ್ಮಾಣವಾಗಲಿವೆ. ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಲ್ಲಿತ್ತು. ಯೋಜನೆ ಜಾರಿಯಿಂದ ನೆಮ್ಮದಿ ಸಿಕ್ಕಿದೆ. ಜಾರಿ ಹಿಂದೆ ನನ್ನ ಪ್ರಯತ್ನ ತುಂಬಾ ಇದೆ’ ಎಂದು ಶಾಸಕ ಎಸ್‌. ತಿಪ್ಪೇಸ್ವಾಮಿ ಹೇಳಿಕೊಂಡರು.

ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್‌.ವೈ. ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ‘ಈ ಯೋಜನೆ ನನ್ನ ಬಹುದಿನದ ಕನಸಾಗಿತ್ತು. ನಿರೀಕ್ಷೆಯಂತೆ ಸರ್ಕಾರ ಅನುಮೋದನೆ ನೀಡಿದೆ. ಕಾಮಗಾರಿ ವಿಳಂಬ ಮಾಡದೇ ಶೀಘ್ರ ಅನುಷ್ಠಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

* * 

ಚಳ್ಳಕೆರೆಯಲ್ಲಿ ನೀಡಿದ್ದ ಭರವಸೆಯಂತೆ ಕ್ರಮ ಕೈಗೊಂಡು ಮುಖ್ಯಮಂತ್ರಿ ನುಡಿದಂತೆ ನಡೆದುಕೊಂಡಿದ್ದಾರೆ.
ಟಿ. ರಘುಮೂರ್ತಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.