ADVERTISEMENT

ನೀರಿಗೆ ಸಮಸ್ಯೆ ಆಗದಂತೆ ಎಚ್ಚರವಹಿಸಿ

ಚಿತ್ರದುರ್ಗ: ಪಿಡಿಒಗಳಿಗೆ ‌ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 13:29 IST
Last Updated 4 ಜನವರಿ 2018, 13:29 IST

ಚಿತ್ರದುರ್ಗ: ‘ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಿ, ಕೊಳವೆಬಾವಿ ಕೊರೆಸುವುದು, ಪೈಪ್ ಅಳವಡಿಕೆ, ವಿದ್ಯುತ್ ಸಂಪರ್ಕ ಕೊಡಿಸುವ ಬಗ್ಗೆ ವಿಳಂಬ ಮಾಡಬೇಡಿ. ಸಮಸ್ಯೆ ಕಂಡ ತಕ್ಷಣ ಸ್ಪಂದಿಸುವುದು ನಿಮ್ಮ ಆದ್ಯತೆಯಾಗಲಿ’ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಚಿತ್ರದುರ್ಗ ತಾಲ್ಲೂಕಿನ ತುರವನೂರು, ಕಡಬನಕಟ್ಟೆ ಸುತ್ತಲಿನ ಮಳೆಯಾಗಿಲ್ಲ. ಹೀಗಾಗಿ ಆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಹಾಗಾಗಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

‘ನೀರಿನ ಸಮಸ್ಯೆಯಿರುವ ಕಡೆ ಕೊಳವೆಬಾವಿ ಕೊರೆಸಿ. ಇರುವ ಕೊಳವೆಬಾವಿಗಳನ್ನು ಪರಿಶೀಲಿಸಿ, ನೀರು ತಳ ಭಾಗಕ್ಕೆ ಹೋಗಿದ್ದರೆ, ಕೇಸಿಂಗ್ ಪೈಪ್‌ಗಳನ್ನು ಕೆಳಗಿ ಇಳಿಸಿ. ಆಗಲೂ ನೀರಿನ ಸಮಸ್ಯೆ ಬಗೆಹರಿಯದಿದ್ದರೆ, ಟ್ಯಾಂಕರ್ ಮೂಲಕ ನೀರು ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳಿ. ನೀರಿನ ಸಮಸ್ಯೆ ತಾರಕಕ್ಕೆ ಹೋಗುವವರೆಗೂ ಕಾಯಬೇಡಿ. ಈ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಸಿದರು.

ತುರವನೂರು, ಕಡಬನಕಟ್ಟೆ ಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ಘಟಕಗಳಿಗೆ ಪೂರೈಸುವ ಕೊಳವೆಬಾವಿಯಲ್ಲಿ ನೀರಿನ ಕೊರತೆಯಾದರೆ, ಟ್ಯಾಂಕರ್ ನೀರು ಪೂರೈಸಬೇಕು ಎಂದು ಸಲಹೆ ನೀಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿರುವ ಚಿತ್ರದುರ್ಗ ತಾಲ್ಲೂಕುಗಳ ಹಳ್ಳಿಗಳನ್ನು ಪಟ್ಟಿಮಾಡಿದ ಶಾಸಕರು ಅಲ್ಲಿನ ಸಮಸ್ಯೆಯ ಸ್ವರೂಪ ಪರಿಶೀಲಿಸಿದರು.

ಗ್ರಾಮ ಪಂಚಾಯ್ತಿಗಳಲ್ಲಿ ಸದ್ಯಕ್ಕೆ ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ ವ್ಯಯಮಾಡದೇ ಕುಡಿಯುವ ನೀರಿಗೆ ಹಣವಿಟ್ಟುಕೊಳ್ಳಬೇಕು. ಬರಗಾಲ ಘೋಷಣೆಯಾಗುವವರೆಗೆ ಯಾವುದೇ ಹೊಸ ಅನುದಾನ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಸೂರೇನಹಳ್ಳಿ, ಮುದ್ದಾಪುರ, ಉಪ್ಪಾರಹಟ್ಟಿ, ದೊಡ್ಡಘಟ್ಟ, ಬೊಗಳೇರಹಟ್ಟಿ, ಚಿಪ್ಪಿನಕೆರೆಯಲ್ಲಿ ನಿವೇಶನ ಹಂಚಿಕೆಗೆ ಜಾಗದ ಸಮಸ್ಯೆ ಆಗಿದೆ. ಜನವರಿ 20ರೊಳಗೆ ಸರ್ಕಾರಿ ಭೂಮಿ ಗುರುತಿಸುವ ಕಾರ್ಯವಾಗಬೇಕು ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೇಣುಗೋಪಾಲ್, ತಹಶೀಲ್ದಾರ್ ಮಲ್ಲಿಕಾರ್ಜುನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.