ADVERTISEMENT

ನೊಂದ ಒಂಬತ್ತು ಮಂದಿಗೆ ರೂ 14.5 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 9:35 IST
Last Updated 22 ಜನವರಿ 2018, 9:35 IST

ಚಿತ್ರದುರ್ಗ: ಕ್ರಿಮಿನಲ್ ಚೌಕಟ್ಟಿನಲ್ಲಿ ದೌರ್ಜನ್ಯಕ್ಕೆ ಒಳಗಾದ ಒಂಬತ್ತು ಮಂದಿಗೆ ₹ 14.5 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್‍.ಬಿ.ವಸ್ತ್ರಮಠ ತಿಳಿಸಿದರು.

ಇಲ್ಲಿನ ವಕೀಲರ ಭವನದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘದಿಂದ ನ್ಯಾಯ ಸಂಯೋಗ ಮತ್ತು ನೊಂದ ವ್ಯಕ್ತಿಗಳಿಗೆ ಪರಿಹಾರ ಯೋಜನೆ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು - ನೆರವು ಹಾಗೂ ಪರಿಹಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರು ತಿಂಗಳಲ್ಲಿ ಸುಮಾರು 35 ದೌರ್ಜನ್ಯ ಪ್ರಕರಣಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಅದರಲ್ಲಿ 9 ಪ್ರಕರಣಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರದ ಹಣ ಬಿಡುಗಡೆಯಾಗಿದ್ದು, ಅದನ್ನು ವಿತರಿಸಲಾಗುತ್ತಿದೆ. ಈ ಪರಿಹಾರದ ಹಣವನ್ನೂ ರಾಜ್ಯ ಸರ್ಕಾರವೇ ನೀಡುವುದರಿಂದ ಅಲ್ಲಿಂದ ಬಂದ ನಂತರ ಇನ್ನುಳಿದ ಪ್ರಕರಣಗಳಲ್ಲಿನ ನೊಂದವರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

‘ಪರಿಹಾರ ನೀಡಲು ಪ್ರತ್ಯೇಕವಾದ ಸಮಿತಿ ಇದೆ. ದೌರ್ಜನ್ಯ ಪ್ರಕರಣಗಳ ಕುರಿತು ಸಮಿತಿಯ ಪದಾಧಿಕಾರಿಗಳು ಪರಸ್ಪರ ಚರ್ಚಿಸಿದ ನಂತರ ಪರಿಹಾರ ಕೊಡಿಸುವ ಕುರಿತು ತೀರ್ಮಾನಿಸುತ್ತಾರೆ. ಈ ಹಿಂದೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ₹ 32 ಲಕ್ಷ ಪರಿಹಾರ ವಿತರಿಸಲಾಗಿತ್ತು. ನಾನೂ ಜಿಲ್ಲಾ ನ್ಯಾಯಾಧೀಶನಾಗಿ ಬಂದ ನಂತರ ಈವರೆಗೂ ಸರ್ಕಾರದಿಂದ ಒಟ್ಟು ₹46.5 ಲಕ್ಷ ಪರಿಹಾರ ಕೊಡಿಸಿದ್ದೇನೆ’ ಎಂದು ತಿಳಿಸಿದರು.

2015 -16 ನೇ ಸಾಲಿನಲ್ಲಿ ಕಾನೂನು ಪದವಿ ಮುಗಿಸಿ, ವಕೀಲ ವೃತ್ತಿ ಪ್ರಾರಂಭಿಸಿರುವ ಪರಿಶಿಷ್ಟ ಜಾತಿಯ 4 ಮತ್ತು ಪರಿಶಿಷ್ಟ ಪಂಗಡದ 3 ಸೇರಿ ಸರ್ಕಾರದ ನಿಯಮಾನುಸಾರ ಒಟ್ಟು 7 ಮಂದಿ ಅರ್ಹ ಫಲಾನುಭವಿಗಳಿಗೆ ಉಚಿತ ಲ್ಯಾಪ್‍ಟ್ಯಾಪ್ ನೀಡಲಾಗುತ್ತಿದೆ. ಇದರ ಉಪಯೋಗ ಪಡೆದು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್.ಬಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಬಸವರಾಜ ಎಸ್.ಚೇಗರೆಡ್ಡಿ, ಡಿ.ವೀರಣ್ಣ, ಎಚ್.ಎಂ.ವಿರೂಪಾಕ್ಷಯ್ಯ, ಟಿ.ಶಿವಣ್ಣ, ಸಿ.ಸೆಲ್ವಕುಮಾರ್, ಶಂಕರಪ್ಪ ಬಿ.ಮಾಲಶೆಟ್ಟಿ, ಪ್ರಧಾನ ಸರ್ಕಾರಿ ಅಭಿಯೋಜಕ ಜಯರಾಂ, ವಿಶೇಷ ಸರ್ಕಾರಿ ಅಭಿಯೋಜಕ ಬೀರಲಿಂಗಪ್ಪ ಇದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಲಕೊಪ್ಪ ಸ್ವಾಗತಿಸಿದರು.

₹3 ಲಕ್ಷದವರೆಗೂ ಅವಕಾಶ: ನ್ಯಾಯಾಧೀಶರು ಪ್ರಕರಣವೊಂದರ ತೀರ್ಪು ನೀಡಿ, ಇತ್ಯರ್ಥ ಪಡಿಸಿದ ನಂತರವೂ ನೊಂದ ವ್ಯಕ್ತಿಗೆ ಸೂಕ್ತ ಪರಿಹಾರ ದೊರೆಯದ ಸಂದರ್ಭದಲ್ಲಿ ‌ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವೂ ಅವರ ನೆರವಿಗೆ ಧಾವಿಸಲಿದೆ. ಇನ್ನಷ್ಟೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಲಿದೆ. ಒಟ್ಟು ₹ 3 ಲಕ್ಷದವರೆಗೂ ಪರಿಹಾರ ನೀಡಲು ನಮ್ಮಲ್ಲಿ ಅವಕಾಶವಿದೆ ಎಂದು ಎಸ್.ಬಿ.ವಸ್ತ್ರಮಠ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.