ADVERTISEMENT

ಮಾದರಿ ಗ್ರಾಮದ ಕನಸು ತೆರೆದಿಟ್ಟ ನಟ ಪ್ರಕಾಶ್ ರೈ!

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 9:51 IST
Last Updated 28 ಜನವರಿ 2018, 9:51 IST
ಗ್ರಾಮದ ಹಿರಿಯರೊಂದಿಗೆ ಮಾತನಾಡುತ್ತಿರುವ ಪ್ರಕಾಶ್ ರೈ
ಗ್ರಾಮದ ಹಿರಿಯರೊಂದಿಗೆ ಮಾತನಾಡುತ್ತಿರುವ ಪ್ರಕಾಶ್ ರೈ   

ಚಿತ್ರದುರ್ಗ/ಹಿರಿಯೂರು: ಫ್ಲೋರೈಡ್‌ ನೀರಿನ ಸಮಸ್ಯೆ ಬಗೆಹರಿಯಬೇಕು. ಪ್ರತಿ ಮನೆಗೂ ಶೌಚಾಲಯ, ಅಂತರ್ಜಲ ಮಟ್ಟ ಸುಧಾರಣೆ, ಸ್ವಚ್ಛ ಗ್ರಾಮ,  ಕೃಷಿಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ನಡೆಸುವಂತಾಗಬೇಕು. ಮಾದರಿ ಗ್ರಾಮ ಎಂದರೆ ಅದು ಬಂಡ್ಲಾರಹಟ್ಟಿ ತರಹ ಇರಲಿ ಎನ್ನುವಂತಾಗಬೇಕು!

ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಬಂಡ್ಲಾರಹಟ್ಟಿಯಲ್ಲಿ ನಿಂತು, ಮಾದರಿ ಗ್ರಾಮವಾಗಿಸುವ ಕುರಿತು ಕನಸು ಕಂಡವರು ಬಹುಭಾಷಾ ನಟ ಪ್ರಕಾಶ್ ರೈ! ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮದಲ್ಲಿ ಸುತ್ತಾಡಿ, ಗ್ರಾಮಸ್ಥರೊಂದಿಗೆ ಮಾತನಾಡುತ್ತಾ, ‘ಬಂಡ್ಲಾರಹಟ್ಟಿಯೂ ಮಾದರಿ ಗ್ರಾಮವಾಗಬೇಕು. ಬೇರೆ ಗ್ರಾಮವನ್ನು ದತ್ತು ತಗೊಳ್ಳುವಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಈ ಗ್ರಾಮವನ್ನು ಅಭಿವೃದ್ಧಿಪಡಿಸುವ ಕುರಿತು ಸೂಚನೆಯನ್ನೂ ನೀಡಿದರು. ‘ನಾನು ಇಲ್ಲಿ ನಾಯಕನಾಗಲು ಬಂದಿಲ್ಲ. ಈ ಸಮಾಜ ನನಗೆ ಸಾಕಷ್ಟು ಕೊಟ್ಟಿದೆ. ಈ ಸಮಾಜಕ್ಕೆ ಏನನ್ನಾದರೂ ‌ಕೊಡಬೇಕು. ಈ ಉದ್ದೇಶದೊಂದಿಗೆ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದೇನೆ. ತೆಲಂಗಾಣದಲ್ಲಿ ಕೊಂಡರೆಡ್ಡಿಪಲ್ಲಿ ಗ್ರಾಮವನ್ನು ಸ್ಥಳೀಯರೊಂದಿಗೆ ಸೇರಿ ಅಭಿವೃದ್ಧಿಪಡಿಸಿದ್ದೇನೆ. ಈ ಬಯಲು ಸೀಮೆಯಲ್ಲೂ ಅಂಥದ್ದೊಂದು ಪ್ರಯತ್ನ ಮಾಡಬೇಕು ಎನ್ನಿಸಿತು. ಅದಕ್ಕೆ ಜಲತಜ್ಞ ಎನ್. ದೇವರಾಜರೆಡ್ಡಿ ನೆರವಾದರು. ಈ ಬಂಡ್ಲಾರಹಟ್ಟಿ ಸೂಚಿಸಿದರು. ಆ ಉದ್ದೇಶದೊಂದಿಗೆ ಇಲ್ಲಿದ್ದೇನೆ. ನೀವು ಸಹಕಾರ ನೀಡಿದರೆ ಈ ಹಳ್ಳಿಯ ಸಮಸ್ಯೆಗಳಿಗೆ ತಕ್ಕಮಟ್ಟಿಗೆ ಪರಿಹಾರ ದೊರಕಿಸಿಕೊಡಬಹುದು’ ಎಂದು ತಿಳಿಸಿದರು.

ADVERTISEMENT

ಬದಲಾವಣೆ ಎನ್ನುವುದು ಒಂದೇ ದಿನದಲ್ಲಿ ಅಗುವುದಿಲ್ಲ. ಪವಾಡವೂ ಅಲ್ಲ. ಇದಕ್ಕೆ ಸಹನೆ ಬೇಕು. ನನಗೆ ಹಳ್ಳಿ ಅಭಿವೃದ್ಧಿಪಡಿಸಿದ ಅನುಭವವಿದೆ. ಈ ಕಾರ್ಯಕ್ಕೆ ಹಲವು ತಜ್ಞರು ಜತೆಯಾಗುತ್ತಾರೆ. ಅವರು ನಿಮ್ಮೊಂದಿಗೆ ಚರ್ಚಿಸುತ್ತಾರೆ. ಇದೆಲ್ಲ ಒಂದು ತಿಂಗಳು ನಡೆಯುತ್ತದೆ. ಈ ಎಲ್ಲ ಕಾರ್ಯಗಳಿಗೆ ಗ್ರಾಮಸ್ಥರು ಪಕ್ಷಾತೀತ, ಧರ್ಮಾತೀತ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

‘ಹಳ್ಳಿಯ ಅಭಿವೃದ್ಧಿಗೆ ಮುನ್ನ ಪ್ರಚಾರ ಬೇಡ. ಊರು ಅಭಿವೃದ್ಧಿ ಯಾದ ಮೇಲೆ ಎಲ್ಲರನ್ನೂ ಆಹ್ವಾನಿಸಿ. ಒಂದು ಗ್ರಾಮ ಹೇಗೆ ಅಭಿವೃದ್ಧಿ ಯಾಗಬೇಕೆಂದರೆ ಅದು ಬಂಡ್ಲಾರ ಹಟ್ಟಿಯಂತಾಗಬೇಕು ಎನ್ನುವಷ್ಟರ ಮಟ್ಟಿಗೆ ಊರನ್ನು ಬದಲಾಯಿಸಿ ತೋರಿಸಿ’ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಜಲತಜ್ಞ ಎನ್. ದೇವರಾಜರೆಡ್ಡಿ, 'ಗ್ರಾಮದ ನೀರು ಫ್ಲೋರೈಡ್‌ಯುಕ್ತವಾಗಿದೆ. ಕುಡಿಯುಲು, ಕೃಷಿ ಚಟುವಟಿಕೆಗೂ ಯೋಗ್ಯವಿಲ್ಲ. ಚಿಕ್ಕವಯಸ್ಸಿಗೆ ಕೈಕಾಲು ನೋವು ಕಾಣಿಸಿಕೊಳ್ಳುತ್ತಿದೆ. ಗ್ರಾಮದ ಗೋಮಾಳದಲ್ಲಿ ಸಣ್ಣ ಕೆರೆಯೊಂದನ್ನು ನಿರ್ಮಿಸಿದರೆ ಸಿಹಿ ನೀರು ಸಿಗುವ ಸಾಧ್ಯತೆ ಇದೆ. ಇದು ಮಾದರಿ ಗ್ರಾಮವಾದರೆ ಬದುಕು ಹಸನಾಗುತ್ತದೆ’ ಎಂದರು.

ಉಪನ್ಯಾಸಕ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮಸ್ಥರ ಜತೆ ಪ್ರಕಾಶ್ ರೈ ಗೋಮಾಳ ವೀಕ್ಷಿಸಿದರು. ಮಹಿಳೆಯರು, ಯುವಕ, ಯುವತಿಯರು ಗ್ರಾಮದ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಜಗದೀಶ್ ರೆಡ್ಡಿ, ನಾರಾಯಣ ರೆಡ್ಡಿ, ಮಹಲಿಂಗಪ್ಪ, ಮುಕುಂದಪ್ಪ, ಯಲ್ಲಾಭೋವಿ, ದೊಡ್ಡತಿಮ್ಮಣ್ಣ, ಗೌಡರ ನರಸಿಂಹಪ್ಪ, ನಾಗೇಂದ್ರರೆಡ್ಡಿ, ಮೈಲಾರಪ್ಪ, ಪ್ರವೀಣ್, ಎಂ.ರಮೇಶ್, ರಾಘವೇಂದ್ರ, ತನುಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.