ADVERTISEMENT

‘ಹಿರಿಯೂರು ತಾಲ್ಲೂಕಿಗೆ ಪಶುಭಾಗ್ಯ ಯೋಜನೆಯಡಿ 2 ಕೋಟಿ ಸಹಾಯಧನ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 9:49 IST
Last Updated 29 ಜನವರಿ 2018, 9:49 IST

ಹಿರಿಯೂರು: ತಾಲ್ಲೂಕಿನಲ್ಲಿ 2015–16ರಿಂದ 2017 ಅಂತ್ಯದವರೆಗೆ ಪಶುಭಾಗ್ಯ ಯೋಜನೆಯಡಿ 161 ಫಲಾನುಭವಿಗಳಿಗೆ ₹ 2.12 ಕೋಟಿ ಸಹಾಯಧನ ವಿತರಿಸಲಾಗಿದೆ ಎಂದು ಶಾಸಕ ಡಿ. ಸುಧಾಕರ್ ಹೇಳಿದರು.

ತಾಲ್ಲೂಕಿನ ಮಲ್ಲಪ್ಪಹಳ್ಳಿಯಲ್ಲಿ ಭಾನುವಾರ ಪಶು ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯೊಂದಿಗೆ ಕೃಷಿಗೆ ಪೂರಕವಾದ ಹೈನುಗಾರಿಕೆ ಕೈಕೊಂಡಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಸರ್ಕಾರ ಪಶುಭಾಗ್ಯ ಯೋಜನೆಯಡಿ ಗ್ರಾಮೀಣ ಭಾಗದ ಸಣ್ಣ, ಅತಿಸಣ್ಣ ರೈತರು, ಭೂರಹಿತರಿಗೆ ಹಸು,ಎಮ್ಮೆ, ಕುರಿ, ಮೇಕೆ, ಹಂದಿ ಹಾಗೂ ಕೋಳಿ ಸಾಕಣಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.

ADVERTISEMENT

ಪರಿಶಿಷ್ಟ ಜಾತಿಯವರಿಗೆ ಘಟಕ ವೆಚ್ಚದ ಶೇ 50ರಷ್ಟು, ಇತರೆ ಫಲಾನುಭವಿಗಳಿಗೆ ಶೇ 25 ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗಕ್ಕೆ ಬೆಂಬಲವಾಗಿ ನಿಂತಿದೆ. ಪಶು ಇಲಾಖೆ ಅಧಿಕಾರಿಗಳು ಹಳ್ಳಿಗಳಲ್ಲಿ ಜಾನುವಾರಿಗೆ ಸಾಂಕ್ರಾಮಿಕ ರೋಗ ತಗುಲದಂತೆ ಎಚ್ಚರವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರವಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಶಿಕಲಾ ಸುರೇಶ್ ಬಾಬು, ಇ.ಪರಮೇಶ್, ಮಹಂತೇಶ್, ಚಂದ್ರಣ್ಣ, ತಿಪ್ಪೇಸ್ವಾಮಿ, ಜಯಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.