ಸಾಂದರ್ಭಿಕ ಚಿತ್ರ
ಚಿತ್ರದುರ್ಗ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಅಪರಾಧಿಗೆ ಆರು ತಿಂಗಳು ಜೈಲು ಹಾಗೂ ₹ 20 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಕುರುಬರಹಳ್ಳಿ ನಿವಾಸಿ ಕಿರಣ್ ಕುಮಾರ್ (28) ಶಿಕ್ಷೆಗೆ ಗುರಿಯಾದ ಅಪರಾಧಿ. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಕೆ.ಗೀತಾ ಆದೇಶ ಪ್ರಕಟಿಸಿದ್ದಾರೆ.
ಆಟೊ ಚಾಲಕನಾಗಿದ್ದ ಕಿರಣ್ ಕುಮಾರ್‌ಗೆ ಚಿತ್ರದುರ್ಗ ನಗರದ ಯುವತಿಯ ಪರಿಚಯವಾಗಿತ್ತು. ಇಬ್ಬರು ಪರಸ್ಪರ ಪ್ರೀತಿಸಿ ಸಲುಗೆಯಿಂದ ಇದ್ದರು. ಮದುವೆಯಾಗುವುದಾಗಿ ನಂಬಿಸಿದ ಕಿರಣ್, ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದನು. ಬಹುದಿನ ಕಳೆದರೂ ವಿವಾಹವಾಗಲು ನಿರಾಕರಿಸಿದ್ದರಿಂದ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಅತ್ಯಾಚಾರ (ಐಪಿಸಿ 376) ಹಾಗೂ ನಂಬಿಸಿ ವಂಚನೆ (ಐಪಿಸಿ 417) ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.
‘ಪ್ರಕರಣದ ತನಿಖೆ ನಡೆಸಿದ ಮಹಿಳಾ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಐಪಿಸಿ 376ಕಲಂ ಅಡಿಯಲ್ಲಿ ದಾಖಲಾಗಿದ್ದ ಅತ್ಯಾಚಾರ ಆರೋಪವನ್ನು ಖುಲಾಸೆಗೊಳಿಸಿತು. ಐಪಿಸಿ 417 ಅಡಿಯಲ್ಲಿ ದಾಖಲಾಗಿದ್ದ ಆರೋಪ ಸಾಬೀತಾಗಿದ್ದು, ಶಿಕ್ಷೆ ಪ್ರಕಟಿಸಿದೆ’ ಎಂದು ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಸರ್ಕಾರಿ ವಕೀಲ ಬಿ.ಗಣೇಶ ನಾಯ್ಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.