ADVERTISEMENT

ಹಿರಿಯೂರು: 23 ಹಾಸ್ಟೆಲ್‌ಗಳಲ್ಲಿ 9 ಹುದ್ದೆಗಳು ಖಾಲಿ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ದಿನೇಶ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 14:17 IST
Last Updated 19 ಜುಲೈ 2024, 14:17 IST
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೆ.ಪಿ.ಮಧಸೂದನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೆ.ಪಿ.ಮಧಸೂದನ್ ಅಧ್ಯಕ್ಷತೆಯಲ್ಲಿ ನಡೆಯಿತು.   

ಹಿರಿಯೂರು: ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆಯುತ್ತಿರುವ 23 ಹಾಸ್ಟೆಲ್‌ಗಳಲ್ಲಿ 9 ನಿಲಯ ಪಾಲಕರ (ವಾರ್ಡನ್) ಹುದ್ದೆಗಳು ಖಾಲಿ ಇವೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಮಾಹಿತಿ ನೀಡಿದರು.

ನಗರದ ಹುಳಿಯಾರು ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೆ.ಪಿ.ಮಧಸೂದನ್ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಊಟ ಕೊಡುತ್ತಿಲ್ಲ ಎಂಬ ದೂರು ಕೆಲವು ಕಡೆ ಕೇಳಿ ಬರುತ್ತಿದೆ. ನಮ್ಮ ತಾಲ್ಲೂಕಿನ ಹಾಸ್ಟೆಲ್ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ಒದಗಿಸಬೇಕು. ಮಕ್ಕಳಿಂದಾಗಲಿ, ಪೋಷಕರಿಂದಾಗಲಿ ದೂರುಗಳು ಬರಬಾರದು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಡಳಿತಾಧಿಕಾರಿ ಸೂಚಿಸಿದರು.

ADVERTISEMENT

‘ನಮ್ಮಲ್ಲಿ ಊಟ– ಉಪಹಾರದ ಬಗ್ಗೆ ಯಾವುದೇ ದೂರುಗಳಿಲ್ಲ. ನಿಯಮಾನುಸಾರ ಉತ್ತಮ ಆಹಾರ ವಿತರಿಸಲಾಗುತ್ತಿದೆ. ಕೆಲವು ಕಡೆ ಹಳೆಯ ಕಟ್ಟಡಗಳಲ್ಲಿ ಹಾಸ್ಟೆಲ್‌ಗಳು ನಡೆಯುತ್ತಿವೆ. ಹರಿಯಬ್ಬೆ, ಬೇತೂರು ಪಾಳ್ಯ, ಕೋಡಿಹಳ್ಳಿಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ವಿಸ್ತೃತ ಯೋಜನೆ ಸಿದ್ಧಪಡಿಸಿ ಕಳಿಸಲಾಗಿದೆ’ ಎಂದು ದಿನೇಶ್ ತಿಳಿಸಿದರು.

ಶೇ 36 ಬಿತ್ತನೆ: ‘ತಾಲ್ಲೂಕಿನಲ್ಲಿ ಮೆಕ್ಕೆಜೋಳ, ತೊಗರಿ, ನವಣೆ, ಸಾಮೆ ಸೇರಿ ಶೇ 36ರಷ್ಟು ಮಾತ್ರ ಬಿತ್ತನೆಯಾಗಿದೆ. ಮೇ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿತ್ತು. ಆದರೆ, ಜುಲೈನಲ್ಲಿ ಮಳೆಯಾಗಿಲ್ಲ. ಹಿಂದಿನ ನಾಲ್ಕೈದು ದಿನಗಳಿಂದ ಸೋನೆ ಮಳೆ ಬರುತ್ತಿದ್ದರೂ, ಬಿತ್ತನೆಗೆ ಪೂರಕವಾಗಿಲ್ಲ. ಈಗ ಬಿತ್ತನೆ ಮಾಡಬೇಕೆಂದರೆ ಕನಿಷ್ಠ 20 ಮಿ.ಮೀ ಮಳೆಯಾಗಬೇಕಿದೆ’ ಎಂದು ತಿಳಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ‘ರೈತರು ಶೇಂಗಾ ಬಿತ್ತನೆಗೆ ಗೊಬ್ಬರ, ಬೀಜಗಳನ್ನು ಖರೀದಿಸಿ ಮಳೆಗಾಗಿ ಕಾಯುತ್ತಿದ್ದಾರೆ. ನಮ್ಮಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಸಾಕಷ್ಟಿದೆ’ ಎಂದರು.

ಬಿಇಒ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ‘ಪ್ರಸಕ್ತ ವರ್ಷ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಉತ್ತೀರ್ಣಕ್ಕೆ ಸಮೀಪವಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ಹಾಗೂ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದವರಿಗೆ ವಿಶೇಷ ತರಗತಿ ನಡೆಸಲು ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಶೇ 90ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಿದ್ದೇವೆ. ಇಲ್ಲಿಯವರೆಗೆ ಶೇ 95ರಷ್ಟು ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ವಾರದೊಳಗೆ ಶೂ ಖರೀದಿಸಲಾಗುವುದು’ ಎಂದಾಗ, ‘ಕಾರ್ಯಕ್ರಮ ರೂಪಿಸುವುದು ಸುಲಭ. ಅನುಷ್ಠಾನಕ್ಕೆ ತರುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಅಧಿಕಾರಿಗಳು, ಶಿಕ್ಷಕರು ಪೋಷಕರ ಸಹಕಾರದೊಂದಿಗೆ ಫಲಿತಾಂಶ ಸುಧಾರಣೆಗೆ ಯತ್ನಿಸಿ’ ಎಂದು ಆಡಳಿತಾಧಿಕಾರಿ ತಾಕೀತು ಮಾಡಿದರು.

220 ಆರ್‌ಒ ಘಟಕ ಕಾರ್ಯಪ್ರವೃತ್ತ: ‘ತಾಲ್ಲೂಕಿನಲ್ಲಿರುವ 238 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 220 ಕಾರ್ಯ ನಿರ್ವಹಿಸುತ್ತಿವೆ. ಉಳಿದವನ್ನು ದುರಸ್ತಿ ಮಾಡಿಸುತ್ತಿದ್ದೇವೆ’ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಹಸನ್ ಬಾಷ ಮಾಹಿತಿ ನೀಡಿದರು.

‘ಇಲಾಖೆ ಮತ್ತು ಏಜೆನ್ಸಿಯವರ ನಡುವೆ ಸಮನ್ವಯ ಇದ್ದರೆ ಆರ್‌ಒ ಘಟಕಗಳಲ್ಲಿ ಸಮಸ್ಯೆ ಬರುವುದಿಲ್ಲ. ಸಾರ್ವಜನಿಕರಿಂದ ಶುದ್ಧ ಕುಡಿಯುವ ನೀರಿನ ಬಗ್ಗೆ ದೂರುಗಳು ಬರದಂತೆ ಎಚ್ಚರ ವಹಿಸಿ’ ಎಂದು ಆಡಳಿತಾಧಿಕಾರಿ ಮಧುಸೂದನ್ ಸೂಚಿಸಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್ ಮಾತನಾಡಿ, ‘ಅಡಿಕೆ ಹೊರತುಪಡಿಸಿ ತೆಂಗು, ಬಾಳೆ, ದಾಳಿಂಬೆ ಇತರೆ ಬೆಳೆಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಈ ಭಾಗದಲ್ಲಿ ತೆಂಗು ಬೆಳೆಗೆ ಯಾವುದೇ ರೋಗ ಕಂಡುಬಂದಿಲ್ಲ. ತೆಂಗು ಪುನಶ್ಚೇತನ ಯೋಜನೆಯಡಿ ರೈತರಿಗೆ ಗೊಬ್ಬರ ವಿತರಿಸಲಾಗುತ್ತಿದೆ’ ಎಂದರು.

ಸಿಡಿಪಿಒ ಇಲಾಖೆಯಿಂದ ಸಭೆಗೆ ಬಂದಿದ್ದ ಆನಂದ್, ಗೃಹಲಕ್ಷ್ಮಿ ಯೋಜನೆಯಡಿ 68,000 ಫಲಾನುಭವಿಗಳ ಖಾತೆಗೆ ಹಣ ಬಂದಿದೆ ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಇಒ ಸತೀಶ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.