ADVERTISEMENT

ಚಿತ್ರದುರ್ಗ: ಶಿಕ್ಷಣ ಇಲಾಖೆಯಲ್ಲಿ 91 ಜನಕ್ಕೆ ಬಡ್ತಿ

ಜಿಲ್ಲೆಯ 64 ಮುಖ್ಯ ಶಿಕ್ಷಕರು, 27 ಸಹ ಶಿಕ್ಷಕರಲ್ಲಿ ಮೂಡಿದ ಸಂತಸ

ಕೆ.ಎಸ್.ಪ್ರಣವಕುಮಾರ್
Published 26 ಸೆಪ್ಟೆಂಬರ್ 2020, 13:29 IST
Last Updated 26 ಸೆಪ್ಟೆಂಬರ್ 2020, 13:29 IST
ಕೆ.ರವಿಶಂಕರ್‌ ರೆಡ್ಡಿ
ಕೆ.ರವಿಶಂಕರ್‌ ರೆಡ್ಡಿ   

ಚಿತ್ರದುರ್ಗ: ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ 64 ಮುಖ್ಯಶಿಕ್ಷಕರಿಗೆ ಪ್ರಾಥಮಿಕ ಶಾಲೆಗಳಿಂದ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹಾಗೂ 27 ಸಹ ಶಿಕ್ಷಕರಿಗೆ ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಿಗೆ ಸೇರಿ ಒಟ್ಟು 91 ಜನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಡ್ತಿ ನೀಡಿ ಆದೇಶಿಸಿದೆ.

ಬಡ್ತಿ ಹೊಂದಲು ಮನವಿ ಮಾಡಿದ್ದ ಇಲಾಖೆಯ ನೌಕರರ ಕನಸು ನನಸಾಗಿದೆ. ಅವರೆಲ್ಲರ ಮೊಗದಲ್ಲಿ ಮಂದಹಾಸ ಮೂಡಿದೆ. ಇದರಲ್ಲಿ ಮೂವರು ದೈಹಿಕ ಶಿಕ್ಷಕರು ಸೇರಿದ್ದಾರೆ.

ಬಡ್ತಿ ಪಡೆಯಲು ಅರ್ಹರಾಗಿದ್ದ ಮುಖ್ಯಶಿಕ್ಷಕರಿಗೆ 3 ವರ್ಷದಿಂದಲೂ ಬಡ್ತಿ ಕೊಟ್ಟಿರಲಿಲ್ಲ. ಈ ಬಾರಿ ಅವರಲ್ಲಿ ಅರ್ಹರಾದವರನ್ನು ಪರಿಗಣಿಸಿ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ 64 ಜನ ಮುಖ್ಯಶಿಕ್ಷಕರಿಗೆ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಗೆ ಬಡ್ತಿ ನೀಡಲಾಗಿದೆ.

ADVERTISEMENT

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗಳ ಸಂಬಂಧ 2019ರ ಜೂನ್ 19ರಂದು ಈ ಹಿಂದೆ ಜಿಲ್ಲೆಯಲ್ಲಿ ಬಡ್ತಿ ನೀಡಲಾಗಿತ್ತು. ಕೋವಿಡ್‌ನಿಂದಾಗಿ ಶಾಲೆ ಆರಂಭವಾಗದಿರುವ ಕಾರಣ ಈ ಬಾರಿ ಬಡ್ತಿ ಪ್ರಕ್ರಿಯೆ ಮೂರು ತಿಂಗಳು ತಡವಾಗಿದ್ದು, ಸೆಪ್ಟೆಂಬರ್‌ 16ರಂದು ಕೌನ್ಸೆಲಿಂಗ್ ಹಮ್ಮಿಕೊಂಡು ಅಂತಿಮಗೊಳಿಸಲಾಯಿತು.

ಇಲಾಖೆ ನೌಕರರ ಜ್ಯೇಷ‌್ಠತೆ, ಮೆರಿಟ್, ರೋಸ್ಟರ್ ಪದ್ಧತಿಯ ಪ್ರಕಾರ ಪದೋನ್ನತಿ ಪಡೆಯಲು ಅರ್ಹರಾಗಿದ್ದವರನ್ನು ಗುರುತಿಸಲಾಗಿತ್ತು. ಮುಖ್ಯಶಿಕ್ಷಕರು, ಗ್ರೇಡ್– 2 ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರೂ ಇದರಲ್ಲಿ ಒಳಗೊಂಡಿದ್ದರು ಎಂದು ಇಲಾಖೆಯ ಉಪನಿರ್ದೇಶಕರ ಕಚೇರಿ ಮಾಹಿತಿ ನೀಡಿದೆ.

ಅನೇಕರು ಪದವಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ ಬಳಿಕ ಬಿ.ಇಡಿ ಸೇರಿ ಉನ್ನತ ಶಿಕ್ಷಣ ಪಡೆದವರೂ ಇದ್ದಾರೆ. ಅವರಲ್ಲಿ ಹಲವು ಅಧಿಕ ವರ್ಷಗಳ ಕಾಲ ವೃತ್ತಿ ಅನುಭವ ಹೊಂದಿದ್ದಾರೆ. ಪದೋನ್ನತಿ ನೀಡುವಂತೆ ಹಲವು ಬಾರಿ ಇಲಾಖೆಗೆ ಮನವಿಯನ್ನೂ ಸಲ್ಲಿಸಿದ್ದರು. ಆದರೆ, ಸಹ ಶಿಕ್ಷಕರನ್ನು ಹೊರತುಪಡಿಸಿ ಮೂರು ವರ್ಷದ ನಂತರ ಮುಖ್ಯಶಿಕ್ಷಕರಿಗೆ ಬಡ್ತಿ ಸಿಕ್ಕಿರುವುದು ಶಿಕ್ಷಕ ವರ್ಗದಲ್ಲೂ ಸಂತಸ ಮೂಡಿಸಿದೆ.

ಬಡ್ತಿ: ಜವಾಬ್ದಾರಿ ಹೆಚ್ಚಿಸಿದೆ

‘ಕೆಲ ವರ್ಷಗಳಿಂದ ನಮ್ಮ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಬಾರಿ ಪದೋನ್ನತಿ ನೀಡಿದೆ. ಇದರಿಂದ ನಾವು ಮತ್ತಷ್ಟು ಪರಿಣಾಮಕಾರಿಯಾಗಿ ಬೋಧನಾ ವೃತ್ತಿಯಲ್ಲಿ ತೊಡಗಿಕೊಳ್ಳಲು ಪ್ರೇರಣೆ ಸಿಕ್ಕಂತಾಗಿದೆ‘ ಎಂದು ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ವೃತ್ತಿ ಜೀವನದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದಾಗ ನಮ್ಮನ್ನು ಗುರುತಿಸಬೇಕು, ಬಡ್ತಿ ನೀಡಬೇಕು ಎಂದು ನಿರೀಕ್ಷಿಸುವುದು ಸಹಜ. ಈಗ ಬಡ್ತಿ ಸಿಕ್ಕಿರುವುದು ಸಂತಸ ಮೂಡಿಸಿದೆ. ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು, ಇಲಾಖೆಯ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇವೆ’ ಎಂದು ಜಿಲ್ಲೆಯ ಕೆಲ ಮುಖ್ಯಶಿಕ್ಷಕರು ಪ್ರತಿಕ್ರಿಯಿಸಿದ್ದಾರೆ.

ಶಿಕ್ಷಕರಿಗೆ ಬಡ್ತಿ: ವಿಷಯವಾರು

ವಿಷಯ ಶಿಕ್ಷಕರ ಸಂಖ್ಯೆ
ಇಂಗ್ಲಿಷ್ 9
ಕನ್ನಡ ಕಲಾ 7
ಸಿ.ಬಿ.ಝೆಡ್ 6
ಹಿಂದಿ 2
ದೈಹಿಕ ಶಿಕ್ಷಣ 3
ಒಟ್ಟು 27

ಮುಖ್ಯ ಶಿಕ್ಷಕರು

ಪಿಎಚ್‌ಎಂ - 54

ಉರ್ದು ಶಾಲೆ - 4

ಪದವಿಧರೇತರ -6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.