ADVERTISEMENT

ವಿಮಾದಾರರ ಸಂಖ್ಯೆಯಲ್ಲಿ ಭಾರಿ ಕುಸಿತ

ಎಲ್‌ಐಎಎಫ್‌ಐ ರಾಷ್ಟ್ರೀಯ ಅಧ್ಯಕ್ಷ ದೇವಿಶಂಕರ್ ಶುಕ್ಲಾ ಆತಂಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 12:20 IST
Last Updated 11 ಡಿಸೆಂಬರ್ 2019, 12:20 IST
ದೇವಿಶಂಕರ್ ಶುಕ್ಲಾ
ದೇವಿಶಂಕರ್ ಶುಕ್ಲಾ   

ಚಿತ್ರದುರ್ಗ: ಕೇಂದ್ರದ ಆರ್ಥಿಕ ನೀತಿಗಳಿಂದಾಗಿ 33 ಕೋಟಿಯಷ್ಟಿದ್ದ ಜೀವ ವಿಮಾ ನಿಗಮದ ವಿಮಾದಾರರ ಸಂಖ್ಯೆ 2 ಕೋಟಿಗೆ ಕುಸಿದಿದೆ ಎಂದು ಜೀವ ವಿಮಾನ ನಿಗಮದ ಏಜೆಂಟ್ಸ್ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ದೇವಿಶಂಕರ್ ಶುಕ್ಲಾ ಕಳವಳ ವ್ಯಕ್ತಪಡಿಸಿದರು.

ಜೀವ ವಿಮಾ ನಿಗಮದ ಶಿವಮೊಗ್ಗ ವಿಭಾಗೀಯ ಪ್ರತಿನಿಧಿಗಳ ಸರ್ವ ಸದಸ್ಯರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ದೇಶದಲ್ಲಿ ಆರು ವರ್ಷಗಳ ಹಿಂದೆ 90 ಲಕ್ಷ ಪ್ರತಿನಿಧಿಗಳಿದ್ದರು. ಈಗ ಕೇವಲ 11 ಲಕ್ಷ ಪ್ರತಿನಿಧಿಗಳಿದ್ದಾರೆ. ಶ್ರಮಕ್ಕೆ ತಕ್ಕ ಪ್ರತಿಫಲ ನೀಡದಿರುವುದರಿಂದ 79 ಲಕ್ಷ ಮಂದಿ ಎಲ್‌ಐಸಿಯಿಂದ ವಿಮುಖರಾಗಿದ್ದಾರೆ. ಇದಕ್ಕೆ ಆಡಳಿತ ಮಂಡಳಿ ಕಾರಣ’ ಎಂದು ದೂರಿದರು.

ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ನಿಗಮದ ಶೇ 50ರಷ್ಟು ಹಣವನ್ನು ಮುಳುಗುತ್ತಿರುವ ಬ್ಯಾಂಕ್‌ಗಳಿಗೆ ಹೂಡಿಕೆ ಮಾಡಲಾಗುತ್ತಿದೆ. ಇದರಿಂದ ವಿಮಾ ನಿಗಮದಲ್ಲಿ ಆರ್ಥಿಕ ಸಮಸ್ಯೆಗಳು ಸೃಷ್ಟಿಯಾಗಿವೆ. ಬೋನಸ್ ಪ್ರಮಾಣ ಶೇ 40ಕ್ಕೆ ಇಳಿದಿದೆ. ಇದು ಹೀಗೆಯೇ ಮುಂದುವರಿದರೆ ಗ್ರಾಹಕರು, ಪ್ರತಿನಿಧಿಗಳ ಸ್ಥಿತಿ ಚಿಂತಾಜನಕವಾಗಲಿದೆ ಎಂದರು.

ADVERTISEMENT

ಜಿಎಸ್‌ಟಿ ವಿಧಿಸಿರುವುದರಿಂದ ವಿಮೆದಾರರಿಗೆ ತುಂಬಾ ಹೊರೆಯಾಗುತ್ತಿದೆ. ಜಿಎಸ್‌ಟಿ ಕೈಬಿಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗಿದ್ದು, ಅದು ಫಲಪ್ರದವಾಗದಿದ್ದರೆ, ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.