ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರತೇಕವಾಗಿ ವಸತಿಯುತ ಶಿಕ್ಷಣ ವ್ಯವಸ್ಥೆ ಇಲ್ಲದ ಕಾರಣ ಜನಾಂಗದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುವ ಆತಂಕ ಎದುರಾಗಿದೆ.
ತಾಲ್ಲೂಕು ಆಂಧ್ರಪ್ರದೇಶ ಗಡಿಭಾಗದಲ್ಲಿದ್ದು, ಮಳೆಯಾಶ್ರಿತ ಪ್ರದೇಶವಾಗಿದೆ. ಇಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರು ಅತೀ ಹೆಚ್ಚು ಜನ ವಾಸವಿದ್ದು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಈ ತಾಲ್ಲೂಕು ಸಾಕ್ಷರತೆ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಅತೀ ಹಿಂದುಳಿದ ತಾಲ್ಲೂಕು ಎಂದು ಗುರುಸಿಕೊಂಡಿದ್ದು ಇದೇ ಸ್ಥಿತಿ ಮುಂದುವರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ಪ್ರಸ್ತುತ ದೇವಸಮುದ್ರದಲ್ಲಿ ಇಂದಿರಾಗಾಂಧಿ ವಸತಿ ಶಾಲೆ, ಯರ್ಜೇನಹಳ್ಳಿಯಲ್ಲಿ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ ಸೂಲೇನಹಳ್ಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾರ್ಯ ನಿರ್ವಹಿಸುತ್ತಿವೆ. 3 ಶಾಲೆಗಳು ಪರಿಶಿಷ್ಟ ವರ್ಗಕ್ಕೆ ಸೀಮಿತವಾಗಿವೆ ಇಲ್ಲಿ ಸರ್ಕಾರಿ ಮೀಸಲು ಪ್ರಕಾರ ಪ್ರತಿವರ್ಷ ಪ್ರತಿ ಶಾಲೆಯಲ್ಲಿ 5 ಎಸ್‌ಸಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಈ ಮೂಲಕ 3 ಶಾಲೆಗಳಿಂದ 15 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಸಿಗುತ್ತಿದೆ ಎನ್ನಲಾಗಿದೆ.
ಶಿಕ್ಷಣ ಇಲಾಖೆ ಅಂಕಿ– ಅಂಶಗಳ ಪ್ರಕಾರ 1ರಿಂದ 10ನೇ ತರಗತಿವರೆಗೆ ತಾಲ್ಲೂಕಿನಲ್ಲಿ ಪ್ರಸ್ತುತ 2,742 ವಿದ್ಯಾರ್ಥಿಗಳು ಮತ್ತು 2,610 ವಿದ್ಯಾರ್ಥಿನಿಯರು ಸೇರಿ ಒಟ್ಟು 5,357 ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.
‘ಈಗಿರುವ ವಸತಿ ಶಾಲೆ ವ್ಯವಸ್ಥೆ ಈ ಸಂಖ್ಯೆಗೆ ಅನುಗುಣವಾಗಿ ತೀರಾ ಕಡಿಮೆಯಿದೆ. ಕಾರ್ಮಿಕರು ಹೆಚ್ಚಿರುವ ಇಲ್ಲಿ ವಸತಿ ನಿಲಯ ಸಿಗದಿದ್ದರೆ ವಿದ್ಯಾರ್ಥಿಗಳನ್ನು ಶಾಲೆ ಬಿಡಿಸುವ ಸಾಧ್ಯತೆ ಹೆಚ್ಚು. ಅದರಲ್ಲೂ ಹೆಣ್ಣು ಮಕ್ಕಳ ಸ್ಥಿತಿ ಇನ್ನೂ ಭಿನ್ನ. ಜಿಲ್ಲೆಯ ಉಳಿದ ಎಲ್ಲ ತಾಲೂಕುಗಳಲ್ಲಿಯೂ ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಸತಿ ಶಾಲೆ ಇದ್ದು, ಈ ತಾಲ್ಲೂಕಿನಲ್ಲಿ ಮಾತ್ರ ಇಲ್ಲದಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಒ.ಕರಿಬಸಪ್ಪ ದೂರಿದರು.
ನಂಜುಂಡಪ್ಪ ವರದಿಯಲ್ಲಿ ಅತೀ ಹಿಂದುಳಿದ ತಾಲ್ಲೂಕು ಎಂದು ಮೊಳಕಾಲ್ಮುರು ನಮೂದಾಗಿದೆ. ಆದರೆ ಇಲ್ಲಿನ ಸರ್ಕಾರಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಕಾರ್ಯವಾಗುತ್ತಿಲ್ಲ. ಶೇ 30ಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ. ವಸತಿ ಶಾಲೆಗಳನ್ನು ಆರಂಭಿಸಿದಲ್ಲಿ ತುಸು ಅನುಕೂಲವಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ ಎಂದರು.
‘ತಾಲ್ಲೂಕಿನಲ್ಲಿ ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ವಸತಿ ಶಾಲೆ ಆರಂಭಿಸಲು 2018ರಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಕ್ರಮ ಜರುಗಿಲ್ಲ. ಈಗ ಮತ್ತೆ ಮನವಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ಪ್ರತ್ಯೇಕ ಶಾಲೆಗಳು ಇವೆ. ಹೊಳಲ್ಕೆರೆಯಲ್ಲಿ 3 ಶಾಲೆ ಕಾರ್ಯ ನಿರ್ವಹಿಸುತ್ತಿವೆ’ ಎಂದು ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಪ್ರಭಾರಿ ನಾಸಿರುದ್ದೀನ್ ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಮನವಿ ಮಾಡಿದೆ.
ಇದು ಅರ್ಹ ಬೇಡಿಕೆಯಾಗಿದೆ. ಪ್ರತ್ಯೇಕ ವಸತಿ ಶಾಲೆ ಆರಂಭಕ್ಕೆ ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ತರಲಾಗಿದೆ. ಶೀಘ್ರ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.ಎನ್.ವೈ. ಗೋಪಾಲಕೃಷ್ಣ ಶಾಸಕ ಮೊಳಕಾಲ್ಮುರು
ಎಸ್‌ಸಿ ಪ್ರತ್ಯೇಕ ವಸತಿ ಶಾಲೆಯಲ್ಲಿ ಒಟ್ಟು ಸೀಟುಗಳ ಪೈಕಿ ಶೇ 75ರಷ್ಟು ಎಸ್‌ಸಿಗೆ ಮೀಸಲಾಗುತ್ತದೆ. ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು.ನಾಸಿರುದ್ದೀನ್ ಸಮಾಜ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.