ADVERTISEMENT

ಕಾಂಕ್ರೀಟ್ ಹಾಕಲು ಹೊರಟವರು ಸಾವಿನ ದವಡೆಗೆ

ಮನೆ ಬಿಟ್ಟು ಹೋಗಿದ್ದ ಕುಡುಕ ತಂದೆ: ತಾಯಿ ಜೊತೆ ಬಂದಿದ್ದ ಬಾಲಕಿಯೂ ಬಲಿ

ಸುವರ್ಣಾ ಬಸವರಾಜ್
Published 27 ಏಪ್ರಿಲ್ 2021, 3:08 IST
Last Updated 27 ಏಪ್ರಿಲ್ 2021, 3:08 IST

ಹಿರಿಯೂರು: ‘ಕುಡುಕ ಗಂಡ ಮನೆ ಬಿಟ್ಟು ಹೋಗಿದ್ದಾನೆ. ಕೂಲಿಯಿಂದಲೇ ಇಬ್ಬರು ಮಕ್ಕಳನ್ನು ಸಾಕಬೇಕು. ಕೊರೊನಾ ಕಾರಣಕ್ಕೆ ಶಾಲೆಗಳು ನಡೆಯುತ್ತಿಲ್ಲ. ಮನೆಯಲ್ಲಿ ಬಿಡಲು ಯಾರೂ ಜೊತೆಗಿಲ್ಲ. ಹೀಗಾಗಿ ಆರು ವರ್ಷದ ದೀಪಿಕಾ ಹಾಗೂ ಎಂಟು ವರ್ಷದ ರಾಹುಲ್‌ನನ್ನು ಕೂಲಿಗೆ ಹೋಗುವ ಕಡೆಗೆಲ್ಲ ಕರೆದೊಯ್ಯುತ್ತಿದ್ದೆ. ಗಂಡ ಮನೆಯಲ್ಲಿದ್ದು ಮಕ್ಕಳನ್ನು ನೋಡಿಕೊಂಡಿದ್ದರೆ ಸಾಕಿತ್ತು. ನಾನು ದುಡಿದು ತರುತ್ತಿದ್ದೆ. ಈಗ ನನ್ನ ಮಗಳು ದೀಪಿಕಾ ಬಾರದ ಲೋಕಕ್ಕೆ ಹೋಗಿದ್ದಾಳೆ...’

ಇವು ತಾಲ್ಲೂಕಿನ ಚಳ್ಳಕೆರೆ ರಸ್ತೆಯ 103ನೇ ಕ್ರಾಸ್ ಸಮೀಪ ಸೋಮವಾರ ನಡೆದ ಟಾಟಾ ಏಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿಜಯಲಕ್ಷ್ಮಿ ಅವರ ಸಂಕಟಭರಿತ ಮಾತುಗಳು.

ಮುದ್ದಿನ ಮಗಳು ಮೃತಪಟ್ಟಿದ್ದರಿಂದ ತಮಗಾಗಿರುವ ಗಾಯವನ್ನೂ ಲೆಕ್ಕಿಸದ ಅವರ ಗೋಳು ಮುಗಿಲು ಮುಟ್ಟಿತ್ತು. ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂಬ ವಿಷಯ ತಿಳಿದಾಗ ಮಗ ರಾಹುಲ್ ಹೇಗಿದ್ದಾನೆ ಎಂದು ಕೂಗಿ ಕೂಗಿ ಕೇಳುತ್ತಿದ್ದ ದೃಶ್ಯ ಮನಃಕಲಕುವಂತಿತ್ತು.

ADVERTISEMENT

ಕಾಂಕ್ರೀಟ್ ಹಾಕುವ ಜಾಗವೇ ತಿಳಿಯದು: ‘ವೇದಾವತಿ ಬಡಾವಣೆಯ ತಮಿಳು ಕಾಲೊನಿಯಲ್ಲಿ ಕಾಂಕ್ರೀಟ್ ಹಾಕುವ ಕೆಲಸ ಮಾಡುವ ಏಳೆಂಟು ಬ್ಯಾಚ್‌ಗಳಿವೆ. ನಮಗ್ಯಾರಿಗೂ ಕಾಂಕ್ರೀಟ್ ಹಾಕುವ ಊರು, ಮಾಲೀಕರು ಯಾರು ಎಂದು ತಿಳಿದಿರುವುದಿಲ್ಲ. ನನ್ನ ಚಿಕ್ಕಮ್ಮ ಕಾಳಿಯಮ್ಮ ನಮ್ಮ ಗುಂಪಿನ ಮುಖ್ಯಸ್ಥೆ. ಸಿದ್ಧರಿರುವಂತೆ ಭಾನುವಾರ ಬೆಳಿಗ್ಗೆಯೇ ಹೇಳಿದ್ದರು. 13 ಜನ ಟಾಟಾ ಏಸ್ ವಾಹನದಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ವಾಹನ ವೇಗವಾಗಿ ರಸ್ತೆ ಬಿಟ್ಟು ಕೆಳಗೆ ಹೋಗ ತೊಡಗಿತು. ಒಂದು ಕ್ಷಣ ಏನಾಗುತ್ತಿದೆ ಎಂದು ತಿಳಿಯುವುದರ ಒಳಗೆ ವಾಹನ ಪಲ್ಟಿ ಆಯಿತು. ಆಸ್ಪತ್ರೆಗೆ ಕರೆತಂದ ಮೇಲೆ ಮೂವರು ಸತ್ತಿರುವ ಸುದ್ದಿ ತಿಳಿಯಿತು. ನಾನು ಬದುಕಿ ಉಳಿದಿದ್ದೇ ದೊಡ್ಡ ಪವಾಡ’ ಎಂದು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 30 ವರ್ಷದ ಕಾರ್ತಿಕ್ ತಿಳಿಸಿದರು.

‘ನಮಗೆ ಕಾಂಕ್ರೀಟ್ ಹಾಕುವುದು ಬಿಟ್ಟು ಬೇರೆ ಕೆಲಸ ಬರುವುದಿಲ್ಲ. ಹುಟ್ಟಿದಾಗಿನಿಂದ ಬಡತನವನ್ನೇ ಹಾಸಿ ಹೊದ್ದಿದ್ದೇವೆ. ಕೊರೊನಾ ಆರಂಭವಾದಾಗಿನಿಂದ ಸ್ಥಳೀಯವಾಗಿ ನಮಗೆ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಎಲ್ಲಿಂದ ಕರೆ ಬಂದರೂ ಹೋಗುತ್ತೇವೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಸರ್ಕಾರ ವಿನಾಯಿತಿ ಕೊಟ್ಟಿದ್ದರಿಂದ ಸ್ವಲ್ಪ ಮಟ್ಟಿನ ಖುಷಿಯಾಗಿತ್ತು. ಇಂದು ನಡೆದ ಅಪಘಾತ ಮಾನಸಿಕ ಆಘಾತ ಉಂಟು ಮಾಡಿದೆ’ ಎಂದು ಮುರುಗ ಆತಂಕ ವ್ಯಕ್ತಪಡಿಸಿದರು.

ಕಾಂಕ್ರೀಟ್ ಹಾಕಲು ಹೋಗುತ್ತಿದ್ದವರೆಲ್ಲರೂ ತಮಿಳು ಭಾಷಿಕರು. ಎಲ್ಲರೂ ಇಲ್ಲಿಯೇ ಹುಟ್ಟಿ ಬೆಳೆದವರು. ಕಾಂಕ್ರೀಟ್ ಹಾಕುವ ಪ್ರತಿ ತಂಡಕ್ಕೂ ಒಬ್ಬ ಲೀಡರ್ ಇರುತ್ತಾರೆ. ಖರ್ಚು ಕಡಿಮೆ ಮಾಡಿಕೊಳ್ಳುವ ಕಾರಣಕ್ಕೆ ಕಾಮಗಾರಿಗೆ ಬೇಕಿರುವ ಸಲಕರಣೆಗಳನ್ನೆಲ್ಲ ಪ್ರಯಾಣಿಸುವ ವಾಹನದಲ್ಲಿಯೇ ತುಂಬಿಕೊಂಡು ಹೋಗುವುದು ವಾಡಿಕೆ. ವಾಹನದ ತುಂಬ ಸಲಕರಣೆಗಳಿದ್ದ ಕಾರಣ ಸಾವು–ನೋವಿನ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.