ADVERTISEMENT

ಚಿತ್ರದುರ್ಗ| ಪತ್ರಿಕಾ ವಿತರಕರಿಗೆ ನಿವೇಶನ ಸೌಲಭ್ಯ: ಜಿ.ಎಚ್.ತಿಪ್ಪಾರೆಡ್ಡಿ

ನಗರಸಭೆ ವತಿಯಿಂದ ಬಡಾವಣೆ ಅಭಿವೃದ್ಧಿ, ಹಕ್ಕು ಪತ್ರ ವಿತರಣೆ ಬಾಕಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 6:28 IST
Last Updated 29 ಮಾರ್ಚ್ 2023, 6:28 IST
ಚಿತ್ರದುರ್ಗ ಹೊರವಲಯದಲ್ಲಿ ನಿವೇಶನ ಸೌಲಭ್ಯ ನೀಡಿದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರನ್ನು ಪತ್ರಿಕಾ ವಿತರಕರು ಮಂಗಳವಾರ ಸನ್ಮಾನಿಸಿದರು.
ಚಿತ್ರದುರ್ಗ ಹೊರವಲಯದಲ್ಲಿ ನಿವೇಶನ ಸೌಲಭ್ಯ ನೀಡಿದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರನ್ನು ಪತ್ರಿಕಾ ವಿತರಕರು ಮಂಗಳವಾರ ಸನ್ಮಾನಿಸಿದರು.   

ಚಿತ್ರದುರ್ಗ: ನಗರದ ಹೊರವಲಯದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಹಿಂಭಾಗದಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ಪತ್ರಿಕಾ ವಿತರಕರು ಸೇರಿದಂತೆ 96 ನಿರಾಶ್ರಿತರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಮಂಗಳವಾರ ನಿವೇಶನ ಹಂಚಿಕೆ ಮಾಡಿದರು.

ಫಲಾನುಭವಿಗಳ ಪಟ್ಟಿಯೊಂದಿಗೆ ಸ್ಥಳಕ್ಕೆ ಧಾವಿಸಿದ ನಗರಸಭೆಯ ಅಧಿಕಾರಿಗಳು, ಶಾಸಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ನಿವೇಶನ ಹಂಚಿಕೆ ಮಾಡಿದರು. ವಿಜನಯಗರ ಬಡಾವಣೆಯಲ್ಲಿ ಮನೆ ಕಳೆದುಕೊಂಡ 69 ನಿರಾಶ್ರಿತರು, 24 ಪತ್ರಿಕಾ ವಿತರಕರು ಸೇರಿ ಅನೇಕರು ನಿವೇಶನ ಸೌಲಭ್ಯ ಪಡೆದರು. ಹಕ್ಕುಪತ್ರ ವಿತರಣೆ ಮಾತ್ರ ಬಾಕಿ ಉಳಿದಿದೆ.

‘ಮಳೆ, ಚಳಿಯಲ್ಲಿ ನಿತ್ಯವೂ ಪತ್ರಿಕೆ ವಿತರಣೆ ಮಾಡುವವರು ವಿತರಕರು. ದಿನದ ವಿದ್ಯಮಾನವನ್ನು ಪತ್ರಿಕೆಯ ಮೂಲಕ ಮನೆಗೆ ತಲುಪಿಸುವ ಇವರು ಅನೇಕರು ಬಡವರಿದ್ದಾರೆ. ಅವರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ನಿವೇಶನ ಹಂಚಿಕೆ ಮಾಡಲಾಗಿದೆ. ಭೂಮಿ ಲಭ್ಯತೆಯ ಕಾರಣಕ್ಕೆ ನಗರದ ಹೊರಭಾಗದಲ್ಲಿ ನಿವೇಶನ ನೀಡಬೇಕಾಯಿತು’ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ತಿಳಿಸಿದರು.

ADVERTISEMENT

‘ಚಿತ್ರದುರ್ಗದ ವಿಜಯನಗರದ ವಾಲ್ಮೀಕಿ, ಅಂಬೇಡ್ಕರ್‌ ಸೇರಿ ವಿವಿಧ ನಿಗದ ಅಡಿಯಲ್ಲಿ ವಸತಿ ಸೌಲಭ್ಯ
ಕಲ್ಪಿಸಲಾಗಿತ್ತು. ಖಾಸಗಿ ಬಡಾವಣೆಯ ರಸ್ತೆ ಸಂಪರ್ಕದ ವಿಚಾರವಾಗಿ ಇದೇ ಕಾಲೊನಿಯ ಅನೇಕರು ಮನೆ
ಕಳೆದುಕೊಳ್ಳಬೇಕಾಯಿತು. ಇಂತಹ ಅರ್ಹ ಫಲಾನುಭವಿಗಳಿಗೆ ಇಲ್ಲಿ ನಿವೇಶನ ನೀಡಲಾಗಿದೆ’ ಎಂದು
ಹೇಳಿದರು.

‘ವಿದ್ಯುತ್‌, ಕುಡಿಯುವ ನೀರು ಸೇರಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. 30 ಅಡಿಗೂ ಹೆಚ್ಚು ವಿಸ್ತೀರ್ಣದ ರಸ್ತೆ ಇದೆ. ಅಂಗನವಾಡಿ, ದೇಗುಲ ಸೇರಿ ಎಲ್ಲವೂ ಬಡಾವಣೆಯಲ್ಲಿ ಇರಲಿವೆ. ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗಿದೆ. ಇದಕ್ಕೆ ಕಾನೂನು ರೂಪ ನೀಡುವ ಉದ್ದೇಶದಿಂದ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ಚುನಾವಣೆ ಕಳೆದ ಬಳಿಕ ನಗರಸಭೆ ಪ್ರಕ್ರಿಯೆ
ಮುಂದುವರಿಸುತ್ತದೆ’ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್‌ ಗೌಡಗೆರೆ, ಪತ್ರಿಕಾ ವಿತರಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗ, ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ಸುರೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.