ADVERTISEMENT

ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ಪ್ರಭಾಕರ್

​ಪ್ರಜಾವಾಣಿ ವಾರ್ತೆ
Published 16 ಮೇ 2025, 15:40 IST
Last Updated 16 ಮೇ 2025, 15:40 IST
ಹಿರಿಯೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಸಭೆಯನ್ನು ಉಪ ಕೃಷಿ ನಿರ್ದೇಶಕ ಪ್ರಭಾಕರ್ ಉದ್ಘಾಟಿಸಿದರು
ಹಿರಿಯೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಸಭೆಯನ್ನು ಉಪ ಕೃಷಿ ನಿರ್ದೇಶಕ ಪ್ರಭಾಕರ್ ಉದ್ಘಾಟಿಸಿದರು   

ಹಿರಿಯೂರು: ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ, ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಂತಹ ವರ್ತಕರ ಪರವಾನಗಿ ರದ್ದು ಮಾಡಲಾಗುವುದು ಎಂದು ಉಪ ಕೃಷಿ ನಿರ್ದೇಶಕ ಪ್ರಭಾಕರ್ ಎಚ್ಚರಿಸಿದರು.

ನಗರದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಕೃಷಿ ಪರಿಕರ ಮಾರಾಟಗಾರರಿಗೆ ಹಮ್ಮಿಕೊಂಡಿದ್ದ ಜಾಗೃತಿ ಸಭೆ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಹಂಗಾಮಿನಲ್ಲಿ ಮುಂಗಾರು ಬೇಗ ಆರಂಭವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ರೈತರಿಗೆ ಸಕಾಲದಲ್ಲಿ ಬೇಡಿಕೆ ಇರುವಷ್ಟು ಬಿತ್ತನೆ ಬೀಜ, ರಸಗೊಬ್ಬರ ನೀಡಬೇಕಾದುದು ಇಲಾಖೆಯ ಮತ್ತು ಮಾರಾಟಗಾರರ ಜವಾಬ್ದಾರಿ. ರೈತರಿಗೆ ವಂಚಿಸದೇ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ADVERTISEMENT

ಕೃಷಿಪರಿಕರ ಮಾರಾಟಗಾರರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಪರಸ್ಪರ ವಿಶ್ವಾಸದಿಂದ ಕೆಲಸ ನಿರ್ವಹಿಸಿದಲ್ಲಿ ಮಾತ್ರ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ. ಗುಣಮಟ್ಟದ ಕೃಷಿ ಪರಿಕರಗಳನ್ನು ಮಾತ್ರ ರೈತರಿಗೆ ವರ್ತಕರು ಮಾರಾಟಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ್ ಹೇಳಿದರು.

ಕೃಷಿ ಪರಿಕರ ಮಾರಾಟಗಾರರು ದಾಖಲಾತಿಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಹೆಚ್ಚುವರಿ ಗೋದಾಮಿನ ಅಗತ್ಯವಿದ್ದಲ್ಲಿ ಅದಕ್ಕೂ ಪರವಾನಗಿ ಪಡೆದುಕೊಳ್ಳಬೇಕು. ಅನಧಿಕೃತವಾಗಿ ದಾಸ್ತಾನು ಮಾಡಿರುವ ರಸಗೊಬ್ಬರ ಕಂಡುಬಂದಲ್ಲಿ ಜಪ್ತಿ ಮಾಡಲಾಗುವುದು ಎಂದು ಜಿಲ್ಲಾ ಜಾಗೃತದಳ ಕೋಶದ ಸಹಾಯಕ ನಿರ್ದೇಶಕರಾದ ಉಲ್ಫತ್ ಜೈಬಾ ಎಚ್ಚರಿಸಿದರು.

ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಒ.ಕುಮಾರ್ ಸುರಕ್ಷಿತ ಕೀಟನಾಶಕಗಳ ಬಗ್ಗೆ, ಹಿರಿಯ ವಿಜ್ಞಾನಿ ಓಂಕಾರಪ್ಪ ಕೀಟಗಳು ಮತ್ತು ರೋಗಬಾಧೆ ಹಾಗೂ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಎಂ.ವಿ. ಹರ್ಷ, ಕೃಷಿ ಅಧಿಕಾರಿಗಳಾದ ಕಿರಣ್ ಕುಮಾರ್, ಉಮೇಶ್, ಪಾರ್ವತಮ್ಮ, ಪವಿತ್ರಾ, ಸೋಮಶೇಖರಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.