ADVERTISEMENT

ಹೆಸರು ನೋಂದಾಯಿಸದವರು ಅತಂತ್ರ

ಅಗಸ, ಕ್ಷೌರಿಕರಿಗೆ ₹ 5 ಸಾವಿರ ಪರಿಹಾರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 11:18 IST
Last Updated 18 ಜೂನ್ 2020, 11:18 IST

ಚಿತ್ರದುರ್ಗ: ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗವಿಲ್ಲದೇ ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿರುವ ಅಗಸ ಮತ್ತು ಕ್ಷೌರಿಕ ಸಮುದಾಯದ ಪ್ರತಿ ಕುಟುಂಬಕ್ಕೆ ಸರ್ಕಾರ ₹ 5 ಸಾವಿರ ಪರಿಹಾರ ಘೋಷಿಸಿದೆ. ಉದ್ಯೋಗ ಪತ್ರ ಹಾಗೂ ಕಾರ್ಮಿಕ ಇಲಾಖೆಯ ನೋಂದಣಿ ಇಲ್ಲದೇ ಬಹುತೇಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ಸರ್ಕಾರದ ಪರಿಹಾರ ಪಡೆಯಲು ಕಾರ್ಮಿಕ ಇಲಾಖೆಯ ನೋಂದಣಿ ಅಥವಾ ಉದ್ಯೋಗ ಪ್ರಮಾಣ ಪತ್ರ ಕಡ್ಡಾಯ. ಅಸಂಘಟಿತ ಕಾರ್ಮಿಕ ವಲಯದಲ್ಲಿರುವ ಈ ಎರಡೂ ಸಮುದಾಯದ ಬಹುತೇಕರು ಪ್ರಮಾಣ ಪತ್ರ ಹೊಂದಿಲ್ಲ. ಕಾರ್ಮಿಕ ಇಲಾಖೆಯಲ್ಲಿ ಹೆಸರು ಕೂಡ ನೋಂದಾಯಿಸಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಬೆಳಕಿಗೆ ಬಂದಿದೆ.

ಕಾರ್ಮಿಕ ಇಲಾಖೆಯ ಮಾಹಿತಿ ಪ್ರಕಾರ ಚಿತ್ರದುರ್ಗ ಜಿಲ್ಲೆಯಲ್ಲಿ 595 ಕ್ಷೌರಿಕರು ಮತ್ತು 709 ಅಗಸರು ಸೇರಿ 1,304 ಜನರು ಮಾತ್ರ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ADVERTISEMENT

‘ಕಾರ್ಮಿಕ ಇಲಾಖೆಯಲ್ಲಿ ಪ್ರತಿಯೊಬ್ಬರು ನೋಂದಣಿ ಮಾಡಿಕೊಳ್ಳಬೇಕು. ಅಸಂಘಟಿತ ವಲಯಕ್ಕೆ ಸರ್ಕಾರ ಪರಿಹಾರ, ನೆರವು ಘೋಷಣೆ ಮಾಡಿದಾಗ ಅನುಕೂಲವಾಗಲಿದೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ, ಕಂದಾಯ ಅಧಿಕಾರಿಗಳಿಂದ ಉದ್ಯೋಗ ಪ್ರಮಾಣ ಪತ್ರ ಪಡೆಯಲು ಅವಕಾಶವಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ತಿಳಿಸಿದರು.

‘ರಾಜ್ಯದಲ್ಲಿ 60 ಸಾವಿರ ಅಗಸರು ಹಾಗೂ 2.3 ಲಕ್ಷ ಕ್ಷೌರಿಕರಿದ್ದಾರೆ. ಈ ಎರಡೂ ಸಮುದಾಯದ ಪರಿಹಾರಕ್ಕೆ ಸರ್ಕಾರ ₹ 145 ಕೋಟಿ ಮೀಸಲಿಟ್ಟಿದೆ. ಎಲ್ಲ ಅರ್ಹರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು. ಅರ್ಜಿ ಸಲ್ಲಿಸಲು ಜೂನ್‌ 30 ಕೊನೆಯ ದಿನ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ವಿನುತಾ, ಕಾರ್ಮಿಕ ನಿರೀಕ್ಷಕ ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.