ಚಿತ್ರದುರ್ಗ: ‘ಜುಲೈ ವೇಳೆ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ ಬಿತ್ತನೆಬೀಜ ತಂದು ಬಿತ್ತನೆ ಮಾಡಿದ್ದೆವು. ಗಿಡ 8–9 ಅಡಿ ಎತ್ತರಕ್ಕೆ ಬೆಳೆದಿದೆ. ಆದರೆ, ಇಲ್ಲಿಯವರೆಗೂ ಹೂವು ಬಿಟ್ಟಿಲ್ಲ, ಕಾಯಿ ಕಟ್ಟಿಲ್ಲ. ಕೃಷಿ ಇಲಾಖೆ ಕೊಡುವ ಬಿತ್ತನೆ ಬೀಜವೇ ಕಳಪೆಯಾದರೆ ಹೇಗೆ?’ ಎಂದು ಭರಮಸಾಗರದ ರೈತ ಕೋಗುಂಡೆ ನಾಗರಾಜಪ್ಪ ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಲ್ಲಿ ಬಹುತೇಕ ರೈತರು ಬಿತ್ತನೆ ಮಾಡಿದ್ದ ತೊಗರಿ ಬೆಳೆ ವಿಫಲಗೊಂಡಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಗಿಡ ಆಳೆತ್ತರಕ್ಕೆ ಬೆಳೆದಿದ್ದರೂ ಹೂವು ಬಿಡದೆ, ಕಾಯಿ ಕಟ್ಟದೇ ಹಾಳಾಗಿದೆ. ಖಾಸಗಿ ಕಂಪನಿಗಳ ಬಿತ್ತನೆ ಬೀಜ ತಂದು ಬಿತ್ತಿದವರು ಈಗಾಗಲೇ ಕಟಾವು ಮಾಡಿ ತೊಗರಿಯನ್ನು ಮಾರಾಟ ಮಾಡಿದ್ದಾರೆ. ಆದರೆ, ಕೃಷಿ ಇಲಾಖೆಯನ್ನು ನಂಬಿದವರು ಕೈ ಸುಟ್ಟುಕೊಂಡಿದ್ದಾರೆ ಎಂದು ಅವರು ದೂರಿದರು.
ಜುಲೈ– ಆಗಸ್ಟ್ ವೇಳೆ ಬಿತ್ತನೆ ಮಾಡಿದ್ದ ತೊಗರಿ ಬೆಳೆ ಡಿಸೆಂಬರ್ ವೇಳೆಗೆ ಕಟಾವಿಗೆ ಬರಬೇಕಾಗಿತ್ತು. ಆದರೆ, ಜನವರಿ ಕಳೆಯುತ್ತಾ ಬಂದರೂ ಕಾಯಿ ಕಟ್ಟದಿರುವುದು ರೈತರನ್ನು ಕಂಗೆಡಿಸಿದೆ. ನಷ್ಟ ಅನುಭವಿಸಿದ ಹಲವು ರೈತರು ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಕೃಷಿ ಇಲಾಖೆ ಕಳಪೆ ಬಿತ್ತನೆಬೀಜ ವಿತರಿಸಿದೆ ಎಂದು ಆರೋಪಿಸಿರುವ ರೈತ ಸಂಘ ಕೃಷಿ ಇಲಾಖೆ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದೆ.
‘ಕೃಷಿ ಇಲಾಖೆಯು ಬಿತ್ತನೆ ಬೀಜದ ಪರೀಕ್ಷೆ ನಡೆಸಿ ನಂತರವಷ್ಟೇ ವಿತರಣೆ ಮಾಡುತ್ತಾರೆ ಎಂದು ನಂಬಿದ್ದೆವು. ಈ ಬಾರಿ ಉತ್ತಮ ಮಳೆಯಾಗಿದ್ದು, ಉತ್ತಮ ಇಳುವರಿ ಬರಲಿದೆ ಎಂಬ ವಿಶ್ವಾಸವಿತ್ತು. ಈಗ ನಂಬಿಕೆ ಸುಳ್ಳಾಗಿದೆ. ಅಲ್ಲೊಂದು, ಇಲ್ಲೊಂದು ಹೂವು ಕಾಣಿಸುತ್ತಿದ್ದು, ಗಿಡ ಕಾಯಿಕಟ್ಟಿಲ್ಲ. ಕಳಪೆ ಬಿತ್ತನೆ ಬೀಜವನ್ನು ವಿತರಿಸಿ ಸರ್ಕಾರವೇ ನಮ್ಮನ್ನು ವಂಚಿಸಿದೆ’ ಎಂದು ತುರುವನೂರು ಗ್ರಾಮದ ರೈತ ಶೇಖರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶೇಂಗಾ, ಮೆಕ್ಕೆಜೋಳ, ಈರುಳ್ಳಿಗೆ ಸೀಮಿತರಾಗಿದ್ದ ರೈತರು ಕಳೆದೆರಡು ವರ್ಷಗಳಿಂದ ತೊಗರಿ ಬೆಳೆಯ ಕಡೆಗೆ ಹೊರಳಿದ್ದಾರೆ. ಎಲ್ಲ ಅವಧಿಯಲ್ಲೂ ಉತ್ತಮ ಬೆಲೆ ಸಿಗುವ ಕಾರಣ ರೈತರು ಹೆಚ್ಚಾಗಿ ತೊಗರಿ ಬೆಳೆಯುತ್ತಿದ್ದಾರೆ. ಕೃಷಿ ಇಲಾಖೆ ಸೇರಿ ವಿವಿಧ ಖಾಸಗಿ ಕಂಪನಿಗಳು ಮಾರಾಟ ಮಾಡುವ ಬೀಜ ಬಿತ್ತನೆ ಮಾಡಿದ್ದರು. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 21,000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು.
ಈಗಾಗಲೇ ಜಿಲ್ಲೆಯಲ್ಲಿ ತೊಗರಿ ಕಟಾವಾಗಿದ್ದು, ರೈತರು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕ್ವಿಂಟಲ್ ₹ 8,000ವರೆಗೂ ದರ ಇದ್ದು, ಲಾಭ ತಂದುಕೊಡುತ್ತಿದೆ. ಖಾಸಗಿ ಕಂಪನಿಗಳ ಬಿತ್ತನೆಬೀಜ ಬಿತ್ತಿದ ರೈತರಿಗೆ ಲಾಭವಾಗಿದೆ. ಕೃಷಿ ಇಲಾಖೆಯಿಂದ ಬಿತ್ತನೆಬೀಜ ಖರೀದಿಸಿದ್ದ ರೈತರು ನಷ್ಟ ಅನುಭವಿಸಿದ್ದಾರೆ. ಕೃಷಿ ಇಲಾಖೆ 1,000 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಿದ್ದು ಅದರಲ್ಲಿ ಬಹುತೇಕ ಕಳಪೆಯಾಗಿವೆ ಎಂದು ರೈತರು ಆರೋಪಿಸಿದ್ದಾರೆ.
‘ಶೇಂಗಾ, ಮೆಕ್ಕೆಜೋಳ ಬಿಟ್ಟು ನಾವು ಹೆಚ್ಚು ಲಾಭದ ಆಸೆಗೆ ತೊಗರಿ ಬಿತ್ತನೆ ಮಾಡಿದ್ದೆವು. ಆದರೆ, ಹಾಕಿದ ಬಂಡವಾಳವೂ ಬಾರದಂತಾಗಿದೆ. ಬಿತ್ತನೆಬೀಜ ಪೂರೈಸಿದ ಕಂಪನಿ ಜೊತೆಗೆ ಕೃಷಿ ಇಲಾಖೆಯೇ ಶಾಮೀಲಾಗಿರುವ ಅನುಮಾನವಿದೆ’ ಎಂದು ರೈತ ಮುಖಂಡರು ಆರೋಪಿಸಿದರು.
50– 60 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಹಾಳಾಗಿರಬಹುದು. ಅದಕ್ಕೆ ಕೃಷಿ ಇಲಾಖೆ ಕೊಟ್ಟ ಬಿತ್ತನೆ ಬೀಜವೇ ಸರಿ ಇಲ್ಲ ಎಂದು ಹೇಳುವುದು ಸರಿಯಲ್ಲ. ಬೆಳೆ ಹಾಳಾಗಲು ಬೇರೆ ಬೇರೆ ಕಾರಣಗಳಿವೆಬಿ.ಮಂಜುನಾಥ್ ಜಂಟಿ ಕೃಷಿ ನಿರ್ದೇಶಕ ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.