ADVERTISEMENT

ಹಿರಿಯೂರು | ಕೃಷಿ ಮೇಳ: ಎಷ್ಟು ರೈತರಿಗೆ ಅನುಕೂಲವಾಯಿತು?

ಬಬ್ಬೂರು ಫಾರಂನಲ್ಲಿ 2 ದಿನ ಕಾರ್ಯಕ್ರಮ; ಅಧಿಕಾರಿಗಳ ಕ್ರಮ ಪ್ರಶ್ನಿಸಿದ ರೈತ ಮುಖಂಡರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:04 IST
Last Updated 16 ನವೆಂಬರ್ 2025, 6:04 IST
ಕೃಷಿ–ತೋಟಗಾರಿಕೆ ಮೇಳದಲ್ಲಿ ಅಲಂಕಾರಿಕ ನರ್ಸರಿ ಮುಂದೆ ನಿಂತಿರುವ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು
ಕೃಷಿ–ತೋಟಗಾರಿಕೆ ಮೇಳದಲ್ಲಿ ಅಲಂಕಾರಿಕ ನರ್ಸರಿ ಮುಂದೆ ನಿಂತಿರುವ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು   

ಹಿರಿಯೂರು: ತಾಲ್ಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಮತ್ತು ಶನಿವಾರ ಸಮಗ್ರ ಕೃಷಿ–ರೈತನ ಪ್ರಗತಿ ಶೀರ್ಷಿಕೆಯಡಿ ಏರ್ಪಡಿಸಿದ್ದ ಕೃಷಿ ಮತ್ತು ತೋಟಗಾರಿಕಾ ಮೇಳ ರೈತ ಸಂಘಟನೆಗಳ ದೃಷ್ಟಿಯಲ್ಲಿ ಅಪ್ರಯೋಜಕ ಎನಿಸಿತು. ಆದರೆ, ಎರಡು ದಿನದ ಕಾರ್ಯಕ್ರಮದಲ್ಲಿ 5,700ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದಾಗಿ ಶಿಬಿರದ ಆಯೋಜಕರು ಬಣ್ಣಿಸಿದರು.

‘ಮೇಳದಲ್ಲಿ ನಿಜವಾದ ರೈತರು ಪಾಲ್ಗೊಂಡಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ. ವಸ್ತುಪ್ರದರ್ಶನ ಮಳಿಗೆಗಳವರಿಂದ ಬಾಡಿಗೆ ರೂಪದಲ್ಲಿ ಹಣ ವಸೂಲಿ ಮಾಡಲಾಗಿದೆ. ಬಹಳಷ್ಟು ಪ್ರದರ್ಶಕರು ಎರಡು ದಿನ ಕಾದಿದ್ದು ಬರಿಗೈಲಿ ಮರಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ರೈತರು ಬಂದಿದ್ದರೆ ವಹಿವಾಟು ಹೆಚ್ಚುತ್ತಿತ್ತು. ಇಲಾಖೆಗೆ ಮೇಳ ಮಾಡಿದ್ದೇವೆ ಎಂದು ದಾಖಲೆ ಕೊಡಲು ಮಾಡಿದಂತಿದೆ’ ಎಂದು ರೈತಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.

‘ಮೇಳದಲ್ಲಿ 60 ಮಳಿಗೆಗಳನ್ನು ತೆರೆಯಲಾಗಿತ್ತು. ಅವುಗಳಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಇಲಾಖೆಗಳಿಂದ, ಪ್ರಗತಿಪರ ರೈತರಿಂದ ಯಾವುದೇ ಬಾಡಿಗೆ ಪಡೆದಿಲ್ಲ. ಉತ್ಪಾದಕ ಕಂಪನಿಗಳಿಂದ ಮಾತ್ರ ಬಾಡಿಗೆ ಪಡೆಯಲಾಗಿದೆ. ಶೇ  50 ರಷ್ಟು ಮಳಿಗೆಗಳನ್ನು ಉಚಿತವಾಗಿ ನೀಡಿದ್ದೇವೆ. ಮೊದಲ ದಿನ 3500 ರೈತರು ನೋಂದಣಿ ಮಾಡಿಸಿದ್ದರೆ, ಎರಡನೇ ದಿನ 2400 ಜನ ನೋಂದಣಿ ಮಾಡಿಸಿದ್ದಾರೆ. ಮೇಳದ ಕುರಿತು ವ್ಯಾಪಕ ಪ್ರಚಾರ ನಡೆಸಿದ್ದೇವೆ. ಮಹಿಳಾ ಸ್ವಸಹಾಯ ಸಂಘದವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದುದಕ್ಕೆ ಕೃಷಿಯಲ್ಲಿನ ಅವರ ಆಸಕ್ತಿ ಕಾರಣ‘ ಎಂದು ಕೇಂದ್ರದ ಸಹಸಂಶೋಧನಾ ನಿರ್ದೇಶಕ ಶರಣಪ್ಪ ಜಂಗಂಡಿ ಮಾಹಿತಿ ನೀಡಿದ್ದಾರೆ.

ADVERTISEMENT

ಮೊದಲ ದಿನ ಪೂರ್ವಾಹ್ನ ಉದ್ಘಾಟನೆಗೆ ಸೀಮಿತವಾಗಿದ್ದರೆ, ಮಧ್ಯಾಹ್ನ ಪ್ರಗತಿಪರ ರೈತರಿಗೆ ಸನ್ಮಾನ, ರೈತರೊಂದಿಗೆ ಸಂವಾದ ನಡೆಸಲಾಯಿತು. ಎರಡನೇ ದಿನ ಈರುಳ್ಳಿ ಮತ್ತು ತರಕಾರಿ ಬೆಳೆಗಳ ಕುರಿತು ತೋಟಗಾರಿಕಾ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಪ್ರಕಾಶ್ ಕೆರೂರೆ, ಶೇಂಗಾ ಬೆಳೆಯ ಸುಧಾರಿತ ತಳಿಗಳು ಕುರಿತು ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ  ಎನ್.ವಿ. ಮೋಹನ್, ತೊಗರಿ ಬೆಳೆಯ ಸುಧಾರಿತ ತಳಿಗಳು ಕುರಿತು ಸಹಾಯಕ ಪ್ರಾಧ್ಯಾಪಕ   ನಿರಂಜನ್ ಕುಮಾರ್, ಮೀನು ಸಾಕಾಣಿಕೆ ಕುರಿತು  ಪ್ರಕಾಶ್ ಪಾವಡೆ, ಮಾಹಿತಿ ನೀಡಿದರು. ಇಂತಹ ವಿಚಾರ ಸಂಕಿರಣದಲ್ಲಿ ರೈತರು ಪಾಲ್ಗೊಂಡು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬದಲು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಸರಿಯಲ್ಲ ಎಂದು ಅವರು ತಿಳಿಸಿದರು.

ಮೇಳಗಳು ರೈತ ಸ್ನೇಹಿಯಾಗಿರಬೇಕು: ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ರಾಜಕಾರಣಿಗಳಿಗೆ ಏನು ಕೆಲಸ? ಇಂತಹ ಮೇಳಗಳು ರೈತ ಸ್ನೇಹಿಯಾಗಿರಬೇಕು. ತಮ್ಮ ಕಷ್ಟಗಳನ್ನು ವಿಜ್ಞಾನಿಗಳ ಬಳಿ ಹೇಳಿಕೊಂಡು ಪರಿಹಾರ ಪಡೆಯಲು ರೈತರು ಬರುವಂತಾಗಬೇಕು. ರಾಜಕಾರಣಿಗಳ ಭಾಷಣಗಳನ್ನು ವಿಜೃಂಭಿಸುವುದಾದರೆ ರೈತರನ್ನು ಏಕೆ ಕರೆಯಬೇಕು? ಮುಂದೆ ನಡೆಯುವ ಮೇಳಗಳನ್ನು ರೈತರಿಂದ, ರೈತರಿಗಾಗಿ ನಡೆಸಬೇಕು. ಸಾಂಪ್ರದಾಯಿಕವಾಗಿ ವಸ್ತುಪ್ರದರ್ಶನ ಮಳಿಗೆಗಳನ್ನು ಹಾಕುವ ಬದಲು ಈ ಭಾಗದ ರೈತಾಪಿ ಬದುಕನ್ನು ಬಿಂಬಿಸುವ ರೀತಿ ಪ್ರದರ್ಶನಗಳಿರಬೇಕು ಎಂದು ರೈತಸಂಘದ ತಾಲ್ಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ ಸಲಹೆ ನೀಡಿದರು.

ಎರಡು ದಿನಗಳ ಮೇಳದಲ್ಲಿ ಮೈಸುಡುವ ಬಿಸಿಲಿನ ನಡುವೆಯೂ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ನೋಂದಣಿಯಲ್ಲಿ, ವಸ್ತು ಪ್ರದರ್ಶನ ಮಳಿಗೆಗಳ ವೀಕ್ಷಣೆಯಲ್ಲಿ ಚಟುವಟಿಕೆಯಿಂದ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದರೆ, ಸ್ವಸಹಾಯ ಸಂಘಗಳ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ ಆಸಕ್ತಿಯಿಂದ ಕಾರ್ಯಕ್ರಮ ವೀಕ್ಷಿಸಿದರು.

ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾರದ ರೈತರು ಮಳಿಗೆ ಸ್ಥಾಪಿಸಿ ಬರಿಗೈಯಲ್ಲಿ ಮರಳಬೇಕಾಯಿತು ಕೃಷಿ ಮೇಳದಲ್ಲಿ ರಾಜಕಾರಣಿಗಳಿಗೆ ಏನು ಕೆಲಸ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.