ADVERTISEMENT

ಚಿತ್ರದುರ್ಗ: ₹ 84 ಕೋಟಿ ಬೆಳೆ ವಿಮೆ ಪರಿಹಾರ

ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 13:57 IST
Last Updated 23 ಜೂನ್ 2022, 13:57 IST
ಪಿ.ರಮೇಶ್‌ ಕುಮಾರ್‌
ಪಿ.ರಮೇಶ್‌ ಕುಮಾರ್‌   

ಚಿತ್ರದುರ್ಗ: ಫಸಲ್‌ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ನೋಂದಣಿಯಾದ ರೈತರಿಗೆ ₹ 84 ಕೋಟಿ ಪರಿಹಾರ ವಿತರಣೆಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪಿ.ರಮೇಶ್‌ಕುಮಾರ್‌ ಮಾಹಿತಿ ನೀಡಿದರು.

‘2021ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 68,216 ರೈತರು ನೋಂದಣಿಯಾಗಿದ್ದರು. ಇದರಲ್ಲಿ 48,683 ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿದೆ. ಆಧಾರ್ ಜೋಡಣೆ ಆಗದೇ ಇರುವುದರಿಂದ ಕೆಲವು ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲು ಸಾಧ್ಯವಾಗಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶೇಂಗಾ ಬೆಳೆಗೆ ಅತಿ ಹೆಚ್ಚು ಪರಿಹಾರ ಸಿಕ್ಕಿದೆ. ಇದೊಂದೇ ಬೆಳೆಗೆ ₹ 65 ಕೋಟಿ ಪರಿಹಾರ ವಿತರಿಸಲಾಗಿದೆ. ರಾಗಿ ₹ 2 ಕೋಟಿ, ಮೆಕ್ಕೆಜೋಳ ₹ 9 ಕೋಟಿ, ಈರುಳ್ಳಿ ₹ 4 ಕೋಟಿ, ತೊಗರಿ ₹ 2 ಕೋಟಿ, ಸೂರ್ಯಕಾಂತಿ ₹ 5 ಕೋಟಿ ಬೆಳೆ ಪರಿಹಾರ ವಿತರಿಸಲಾಗಿದೆ. ನೇರ ನಗದು ಮೂಲಕ ರೈತರ ಖಾತೆಗೆ ಜಮೆ ಆಗಿದೆ’ ಎಂದರು.

ADVERTISEMENT

‘ಪಿಎಂಎಫ್‌ಎಂಇ ಯೋಜನೆಯಡಿ ಸಂಸ್ಕರಣಾ ಘಟಕಗಳಿಗೆ ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಸಂಸ್ಕರಣಾ ಘಟಕ ಸ್ಥಾಪಿಸಿದ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಶೇ 35 ಹಾಗೂ ಕೇಂದ್ರ ಸರ್ಕಾರ ಶೇ 15 ಸಬ್ಸಿಡಿ ನಿಗದಿ ಮಾಡಿದೆ. ಗ್ರಾಮೀಣ ಯುವಕರು, ಪದವೀಧರರಿಗೆ ಇದರಿಂದ ಅನುಕೂಲವಾಗಲಿದೆ. ಈವರೆಗೆ 30 ಅರ್ಜಿಗಳು ಬಂದಿವೆ’ ಎಂದು ಹೇಳಿದರು.

‘ಕದರಿ ಲೇಪಾಕ್ಷಿ ತಳಿಯ ಶೇಂಗಾ ಹೆಚ್ಚು ಇಳುವರಿ ಹಾಗೂ ಶೇ 5ರಷ್ಟು ಹೆಚ್ಚಿನ ಎಣ್ಣೆ ಅಂಶ ಹೊಂದಿದೆ. ಆದರೆ, ಜಿಲ್ಲೆಯಲ್ಲಿ ಈ ತಳಿಯ ಶೇಂಗಾ ಬೀಜ ಬಿತ್ತನೆಗೆ ರೈತರು ನಿರಾಸಕ್ತಿ ತೋರಿದ್ದಾರೆ. 165 ಕ್ವಿಂಟಲ್‌ ಶೇಂಗಾ ಬೀಜ ಮಾತ್ರ ಮಾರಾಟವಾಗಿದೆ. ರೈತರು ವದಂತಿಗಳಿಗೆ ಕಿವಿಗೊಡದೇ ಶೇಂಗಾ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಖರೀದಿಸಬೇಕು’ ಎಂದು ಮನವಿ ಮಾಡಿದರು.

13,923 ಮೆಟ್ರಿಕ್ ಟನ್ ಗೊಬ್ಬರ
ಜಿಲ್ಲೆಯಲ್ಲಿ 13,923 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ರಸಗೊಬ್ಬರಕ್ಕೆ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ರಮೇಶ್‌ಕುಮಾರ್‌ ವಿವರಿಸಿದರು.

‘ಯೂರಿಯಾ 4,927 , ಡಿಎಪಿ 1,805, ಎಂಒಪಿ 179, ಎನ್‍ಪಿಕೆಸ್ 6,771, ಎಸ್‍ಎಸ್‍ಪಿ 209, ಕಾಂಪೋಸ್ಟ್ 29 ಮೆಟ್ರಿಕ್ ಟನ್‍ಗಳಷ್ಟು ದಾಸ್ತಾನು ಇದೆ. ರೈತರು ರಸಗೊಬ್ಬರ, ಬೀಜಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ’ ಎಂದರು.

***

ಸೋಯಾಬಿನ್‌ ಬೆಳೆಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ 500 ಹೆಕ್ಟೇರ್‌ ಭೂಮಿಯಲ್ಲಿ ಸೋಯಾಬಿನ್‌ ಬಿತ್ತನೆ ಆಗಬಹುದು ಎಂಬ ನಿರೀಕ್ಷೆ ಇದೆ. ಎಣ್ಣೆಕಾಳು ಬೆಳೆಗಳ ಬಗ್ಗೆ ರೈತರಲ್ಲಿ ಒಲವು ಮೂಡಿದೆ.
-ಡಾ.ಪಿ.ರಮೇಶ್‌ಕುಮಾರ್‌,ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.