ADVERTISEMENT

ಚಿತ್ರದುರ್ಗ: ಏಳು ವರ್ಷದಲ್ಲೇ ಅತಿ ಹೆಚ್ಚು ಮಳೆ

ಮುಂಗಾರು ಮಳೆಗೆ ಹರ್ಷಗೊಂಡ ರೈತ, ಶೇ 62ರಷ್ಟು ಬಿತ್ತನೆ

ಜಿ.ಬಿ.ನಾಗರಾಜ್
Published 6 ಆಗಸ್ಟ್ 2020, 7:32 IST
Last Updated 6 ಆಗಸ್ಟ್ 2020, 7:32 IST
ಚಿತ್ರದುರ್ಗ ಜಿಲ್ಲೆಯಲ್ಲಿ ಹಳ್ಳಕೊಳ್ಳಗಳು ತುಂಬಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಹಳ್ಳಕೊಳ್ಳಗಳು ತುಂಬಿವೆ.   

ಚಿತ್ರದುರ್ಗ: ಬರದ ನಾಡು ಎಂದೇ ಹೆಸರಾಗಿರುವ ಚಿತ್ರದುರ್ಗದಲ್ಲಿ ಏಳು ವರ್ಷದಲ್ಲೇ ಅತಿ ಹೆಚ್ಚು ಮಳೆ 2020ರ ಜುಲೈನಲ್ಲಿ ಸುರಿದಿದೆ. ಸರಾಸರಿ 52 ಮಿ.ಮೀ ಮಳೆ ಆಗಬೇಕಾಗಿದ್ದ ಜಿಲ್ಲೆಯಲ್ಲಿ 134 ಮಿ.ಮೀ ಮಳೆ ಧರೆಗೆ ಇಳಿದಿದೆ.

ಸಾಮಾನ್ಯವಾಗಿ ಮುಂಗಾರು ಮಳೆ ಇಷ್ಟೊಂದು ಪ್ರಮಾಣದಲ್ಲಿ ಸುರಿದಿದ್ದು ಅಪರೂಪ. ಕೆರೆ, ಹೊಂಡ, ಬಾವಿ, ಕಲ್ಯಾಣಿ, ಚೆಕ್‌ಡ್ಯಾಂಗಳು ಹಿಂಗಾರು ಮಳೆಗೆ ಭರ್ತಿಯಾಗುವುದು ವಾಡಿಕೆ. ದಶಕದ ಬಳಿಕ ಮುಂಗಾರು ಮಳೆಗೆ ಹಲವು ಜಲಮೂಲ ತುಂಬಿರುವುದು ರೈತರನ್ನು ವಿಸ್ಮಯಗೊಳಿಸಿದೆ.

ಜುಲೈ ತಿಂಗಳಲ್ಲಿ ಸರಾಸರಿ 52ರಿಂದ 57 ಮಿ.ಮೀ ಮಳೆಯಾಗುವುದು ವಾಡಿಕೆ. 2014ರಲ್ಲಿ 69 ಮಿ.ಮೀ, 2015ರಲ್ಲಿ 37 ಮಿ.ಮೀ, 2016ರಲ್ಲಿ 77 ಮಿ.ಮೀ, 2017ರಲ್ಲಿ 39 ಮಿ.ಮೀ, 2018ಮತ್ತು 2019ರಲ್ಲಿ ತಲಾ 47 ಮಿ.ಮೀ ಮಳೆಯಾಗಿದೆ. ಆದರೆ, 2020ರಲ್ಲಿ ಸರಾಸರಿಗಿಂತ ದುಪ್ಪಟ್ಟು ಮಳೆ ಸುರಿದಿದೆ. ವಿಶೇಷವಾಗಿ ಚಿತ್ರದುರ್ಗ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪುಷ್ಯ ಮಳೆ ಉತ್ತಮವಾಗಿ ಬಂದಿದೆ.

ADVERTISEMENT

ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಹೆಚ್ಚು ಮಳೆ ದಾಖಲಾಗುತ್ತದೆ. ಹಿಂಗಾರು ಹಂಗಾಮಿನಲ್ಲಿ ಈ ಎರಡು ತಿಂಗಳು ಸರಾಸರಿ 100 ಮಿ.ಮೀ.ಗೂ ಹೆಚ್ಚು ಮಳೆಯಾಗುತ್ತದೆ. ಇನ್ನೂ ಮಳೆಯಾಗುವ ಸಾಧ್ಯತೆ ಇರುವುದರಿಂದ ನಿರೀಕ್ಷೆಗಳು ಗರಿಗೆದರಿವೆ. ಅಂತರ್ಜಲ ಮಟ್ಟ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೀರಿಗೆ ತೊಂದರೆ ಉಂಟಾಗುವ ಸಾಧ್ಯತೆ ಕಡಿಮೆಯಾಗಲಿದೆ.

ಮುಂಗಾರು ಹಂಗಾಮಿನಲ್ಲಿ 3.58 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಜುಲೈ ಅಂತ್ಯದವರೆಗೆ 2.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 2019ರಲ್ಲಿ ಮಳೆಯ ಕೊರತೆಯಿಂದ ಜುಲೈ ಅಂತ್ಯಕ್ಕೆ ಶೇ 21ರಷ್ಟು ಮಾತ್ರ ಬಿತ್ತನೆಯಾಗಿತ್ತು. ಪ್ರಸಕ್ತ ವರ್ಷ ಶೇ 62ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ ಎನ್ನುತ್ತವೆ ಕೃಷಿ ಇಲಾಖೆಯ ಅಂಕಿ–ಅಂಶ.

87,495 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಗೆ ಗುರಿ ಹೊಂದಲಾಗಿತ್ತು. ಈ ಪೈಕಿ 83,180 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗಿದೆ. 1,42,620 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಬೇಕಿತ್ತು. ಇದರಲ್ಲಿ 1,01,615 ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. 1,14,798 ಹೆಕ್ಟೇರ್‌ ಪ್ರದೇಶದಲ್ಲಿ ದ್ವಿದಳ ಧಾನ್ಯ, 1,02,420 ಹೆಕ್ಟೇರ್‌ ಜಮೀನಿನಲ್ಲಿ ಎಣ್ಣೆಕಾಳು, 1,03,041 ಹೆಕ್ಟೇರ್‌ ಭೂಮಿಯಲ್ಲಿ ಏಕದಳ ಧಾನ್ಯ ಹಾಗೂ 7,604 ಹೆಕ್ಟೇರ್‌ ಭೂಮಿಯಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಪೂರ್ಣಗೊಂಡಿದೆ.

ಉತ್ತಮ ಮಳೆ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿರುವುದರಿಂದ ರೈತರು ಹರ್ಷಗೊಂಡಿದ್ದಾರೆ. ಮೆಕ್ಕೆಜೋಳಕ್ಕೆ ಮೇಲು ಗೊಬ್ಬರವಾಗಿ ಯೂರಿಯಾ ನೀಡಲು ಇದು ಸಕಾಲವಾಗಿದ್ದು, ರಸಗೊಬ್ಬರ ಖರೀದಿಗೆ ಮುಂದಾಗಿದ್ದಾರೆ. ಅಗತ್ಯ ದಾಸ್ತಾನು ಹೊಂದಿರದ ಪರಿಣಾಮ ಯೂರಿಯಾ ರಸಗೊಬ್ಬರದ ಕೊರತೆ ಉಂಟಾಗಿದೆ. ಸಕಾಲಕ್ಕೆ ಮೇಲು ಗೊಬ್ಬರ ನೀಡಲು ಸಾಧ್ಯವಾಗದಿರುವುದರಿಂದ ಮೆಕ್ಕೆಜೋಳ ಕೆಂಪು ಬಣ್ಣಕ್ಕೆ ತಿರುತ್ತಿದೆ. ಇದು ರೈತರನ್ನು ಆತಂಕಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.