ADVERTISEMENT

ಹೋರಾಟದ ಹಕ್ಕು ಕಸಿದುಕೊಳ್ಳಲು ಸಾಧ್ಯವಿಲ್ಲ: ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 13:03 IST
Last Updated 29 ಡಿಸೆಂಬರ್ 2020, 13:03 IST
ಎಐಟಿಯುಸಿ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಚಿತ್ರದುರ್ಗದ ಕಮ್ಯುನಿಸ್ಟ್ ಕಾರ್ಯಾಲಯದಲ್ಲಿ ಎಐಟಿಯುಸಿ ಮುಖಂಡ ವಿಜಯಭಾಸ್ಕರ್ ಸಂಘಟನೆಯ ಕೈಪಿಡಿ ಬಿಡುಗಡೆ ಮಾಡಿದರು
ಎಐಟಿಯುಸಿ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಚಿತ್ರದುರ್ಗದ ಕಮ್ಯುನಿಸ್ಟ್ ಕಾರ್ಯಾಲಯದಲ್ಲಿ ಎಐಟಿಯುಸಿ ಮುಖಂಡ ವಿಜಯಭಾಸ್ಕರ್ ಸಂಘಟನೆಯ ಕೈಪಿಡಿ ಬಿಡುಗಡೆ ಮಾಡಿದರು   

ಚಿತ್ರದುರ್ಗ: ‘ಹೋರಾಟದ ಹಕ್ಕು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಪ್ರಭಾಪ್ರಭುತ್ವ ವ್ಯವಸ್ಥೆಯ ನಿಜವಾದ ಅಳತೆಗೋಲು ಮುಷ್ಕರದ ಹಕ್ಕು ಎಂಬುದನ್ನು ಯಾರೂ ಮರೆಯಬಾರದು’ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಬಾಸ್ಕರ್ ಅಭಿಪ್ರಾಯಪಟ್ಟರು.

ಎಐಟಿಯುಸಿ ಕಾರ್ಯಾಲಯದಲ್ಲಿ ಎಐಟಿಯುಸಿಯ ಶತಮಾನೋತ್ಸವದ ಅಂಗವಾಗಿಮಂಗಳವಾರ ಆಯೋಜಿಸಿದ್ದ ಸಂಘಟನೆಯ ‘ಕೈಪಿಡಿ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಎಐಟಿಯುಸಿ ಸ್ಥಾಪನೆಯಾಗಿ ಆರು ವರ್ಷ ನಿರಂತರ ಹೋರಾಟ ಮಾಡಿದ್ದರಿಂದಲೇ ಕಾರ್ಮಿಕರಿಗೆ ಮುಷ್ಕರ ನಡೆಸುವ ಹಕ್ಕು ಸಿಕ್ಕಿತು. ದೇಶದ ಮೊದಲ ಕಾರ್ಮಿಕ ಸಂಘಟನೆಯಾಗಿ 1920ರಿಂದ ಅಸ್ತಿತ್ವಕ್ಕೆ ಬಂದ ಸಂಘಟನೆ, ಈವರೆಗೂ ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಾಗಿಲ್ಲ’ ಎಂದು ತಿಳಿಸಿದರು.

ADVERTISEMENT

‘ಕಾನೂನು ಬದ್ಧವಾಗಿ ಕೆಲಸ ನಿರಾಕರಿಸುವ ಅಧಿಕಾರ ಕಾರ್ಮಿಕರಿಗೆ ಇದೆ ಎನ್ನುವುದಾದರೆ ಅದು ಸಂಘಟನೆಯ ಹೋರಾಟದ ಫಲವಾಗಿದೆ. ಕಾರ್ಮಿಕರು ಅಪಘಾತಕ್ಕಿಡಾಗಿ ಕೈಕಾಲು ಕಳೆದುಕೊಂಡರೆ, ಪ್ರಾಣ ಹೋದರೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ’ ಎಂದರು.

ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಎನ್.ಶಿವಣ್ಣ, ‘ಯುವಸಮೂಹಕ್ಕೆ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಿ ಮೋದಿ ಅವರ ಭರವಸೆ ಮಾತಾಗಿಯೇ ಉಳಿದಿದೆ. ಇದರ ಬದಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರು ತತ್ತರಿಸುವಂತೆ ಮಾಡಿರುವುದೇ ಕೇಂದ್ರ ಸರ್ಕಾರದ ಸಾಧನೆ’ ಎಂದು ದೂರಿದರು.

ಕೇಂದ್ರ ಸರ್ಕಾರದ ನೀತಿಯಿಂದ ಸಣ್ಣ, ಮಧ್ಯಮ ಕೈಗಾರಿಕೆಗಳು ದಿವಾಳಿಯಾಗಿವೆ. ರೈತ ವಿರೋಧಿ ಕಾನೂನು ವಿರೋಧಿಸಿ ದೆಹಲಿಯಲ್ಲಿ ಸಾವಿರಾರು ರೈತರು ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದಾರೆ. ಅನ್ನದಾತ ರೈತರು ಹಾಗೂ ಕಾರ್ಮಿಕರನ್ನು ದಿವಾಳಿ ಆಗಿಸುವಲ್ಲಿ ನಿರತರಾಗಿರುವ ಸರ್ಕಾರದ ವಿರುದ್ಧ ದೇಶದ ಮತದಾರರು ಜಾಗೃತಗೊಳ್ಳಬೇಕಿದೆ ಎಂದು ಕೋರಿದರು.

ಎಐಟಿಯುಸಿ ಮುಖಂಡರಾದ ಸಿ.ವೈ.ಶಿವರುದ್ರಪ್ಪ, ಸಿ.ಆರ್. ಉಮಾಪತಿ, ಜಿ.ಸಿ.ಸುರೇಶ್‌ಬಾಬು, ಜಾಫರ್, ಕೆ.ಎನ್.ರಮೇಶ್, ಎಸ್.ಸಿ.ಕುಮಾರ್, ಬಸವರಾಜ್, ಸತ್ಯಕೀರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.